ಬೆಂಗಳೂರು:ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಅಧೀಕ್ಷಕ, ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಆರೋಪ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಅಥವಾ ಜಾರಿ ನಿರ್ದೇಶನಾಲಯಕ್ಕೆ (ಇಡಿ) ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ವಕೀಲ ಕೆ.ಎನ್. ಜಗದೀಶ್ ಕುಮಾರ್ ಈ ಕುರಿತು ತಕರಾರು ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಸಿಬಿಐ, ಇಡಿ ಮತ್ತು ರವಿ ಡಿ. ಚನ್ನಣ್ಣನವರ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಚನ್ನಣ್ಣನವರ್ ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯ ಮಾಹಿತಿ ನೀಡಲಾಗಿದ್ದು, ದಾಖಲೆಗಳನ್ನು ಅರ್ಜಿಯೊಂದಿಗೆ ವಕೀಲ ಕೆ.ಎನ್. ಜಗದೀಶ್ ಲಗತ್ತಿಸಿದ್ದಾರೆ.
ಚನ್ನಣ್ಣನವರ್, ಸಂಸ್ಥೆಯೊಂದೇ ಹೆಸರಿನಲ್ಲಿ 20 ವರ್ಷದ ಅವಧಿಗೆ ಕ್ವಾರಿಯೊಂದನ್ನು ಗುತ್ತಿಗೆ ಪಡೆದಿದ್ದಾರೆ. ಇದರಲ್ಲಿ ಪಾಲುದಾರರಾಗಿದ್ದು, ಈ ಕಂಪನಿಗೆ ಕೋಟ್ಯಂತರ ಹಣ ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಲ್ಲದೆ, ಗುತ್ತಿಗೆ ಪಡೆಯಲು ತಮ್ಮ ಪ್ರಭಾವ, ಅಧಿಕಾರ ಮತ್ತು ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಚನ್ನಣ್ಣನವರ್ ವಿರುದ್ಧ ಮತ್ತೊಂದು ದೂರು: ಚನ್ನಣ್ಣನವರ್ ಭ್ರಷ್ಟಾಚಾರದ ಬಗ್ಗೆ ಮಂಜುನಾಥ್ ಎಂಬುವರು ದೂರು ಸಹ ದಾಖಲಿಸಿದ್ದಾರೆ. ಈ ಕುರಿತು ಮಾಧ್ಯಮಗಳು ವರದಿ ಮಾಡದಂತೆ ಸಿವಿಲ್ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ಸಹ ಪಡೆದುಕೊಂಡಿದ್ದಾರೆ. ಸರ್ಕಾರ ಸಹ ಈವರೆಗೂ ಈ ಭ್ರಷ್ಟ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಜುರುಗಿಸಿಲ್ಲ. ಆದ್ದರಿಂದ ಆದಾಯ ಮೀರಿ ಮತ್ತು ಅಕ್ರಮ ಆಸ್ತಿ ಗಳಿಕೆ ಸಂಬಂಧ ಚನ್ನಣ್ಣನವರ್ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲು ಸಿಬಿಐ ಅಥವಾ ಇಡಿಗೆ ಆದೇಶಿಸಬೇಕು ಮತ್ತು ಸೇವೆಯಿಂದ ಅಮಾನತುಪಡಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರ ಜಗದೀಶ್ ಕುಮಾರ್ ಕೋರಿದ್ದಾರೆ.
ಇದನ್ನೂ ಓದಿ:ಓದಿದ್ದು 10ನೇ ತರಗತಿ, ಹಲವು ಕೃಷಿ ಸಾಧನಗಳ ಆವಿಷ್ಕಾರ!: ಧಾರವಾಡದ ರೈತ ಅಬ್ದುಲ್ ಖಾದರ್‌ಗೆ 'ಪದ್ಮಶ್ರಿ'