ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕಾಯ್ದೆ 2020ರ ವಿವಿಧ ಸೆಕ್ಷನ್ಗಳನ್ನು ಸಂವಿಧಾನ ಆಶಯಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿ ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಿಟಿಜನ್ ಆಕ್ಷನ್ ಫೋರಂ ಎಂಬ ಸರ್ಕಾರೇತರ ಸಂಘ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ನಂತರ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ. ಬಿಬಿಎಂಪಿ ಕಾಯಿದೆ 2020ರ ಸೆಕ್ಷನ್ಗಳಾದ 75, 76, 77, 78, 79 ಮತ್ತು 86 ಸಂವಿಧಾನದ ಮೂಲ ಆಶಯಗಳನ್ನು ಉಲ್ಲಂಘಿಸಿವೆ. ಹೀಗಾಗಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಿಬಿಎಂಪಿ ಕಾಯಿದೆಯ ಸೆಕ್ಷನ್ 75 ಮತ್ತು 77ರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ರಚನೆ ಮಾಡಿರುವ ಕ್ಷೇತ್ರ ಸಮಾಲೋಚನಾ ಸಮಿತಿ ಮತ್ತು ವಲಯ ಸಮಿತಿಗಳು ಸಂವಿಧಾನ ಅಡಿಯಲ್ಲಿ ರಚನೆ ಮಾಡಿರುವ ವಾರ್ಡ್ ಸಮಿತಿಗೆ ನೀಡಿರುವ ಅಧಿಕಾರವನ್ನು ಕಿತ್ತುಕೊಳ್ಳಲಿದೆ. ಸಂವಿಧಾನದ ಪರಿಚ್ಛೇದ 243- ಎಸ್ನಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪುರಸಭೆಗಳಲ್ಲಿ ವಾರ್ಡ್ ಸಮಿತಿಗಳನ್ನು ರಚನೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಬಿಬಿಎಂಪಿ ಕಾಯಿದೆ ಪ್ರಕಾರ ರಚನೆ ಮಾಡಿರುವ ಸಮಿತಿಗಳ ಸಂವಿಧಾನದ ಬಾಹಿರವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅಲ್ಲದೆ, ಬಿಬಿಎಂಪಿ ಕಾಯ್ದೆಯ ಸೆಕ್ಷನ್ 76 ಸಮಾಲೋಚನಾ ಸಮಿತಿ ಮತ್ತು ಸೆಕ್ಷನ್ 78 ವಲಯ ಸಮಿತಿ ರಚನೆ ಮತ್ತು ಅಧಿಕಾರ ನೀಡುತ್ತದೆ. ಈ ಸಮಿತಿಗಳು ವಾರ್ಡ್ ಸಮಿತಿಗಳ ಮೇಲೆ ಅಧಿಕಾರ ಚಲಾವಣೆ ಮಾಡಿದಂತಾಗುತ್ತದೆ, ಈ ಬೆಳವಣಿಗೆ ಕಾನೂನು ಬಾಹಿರವಾಗಿದೆ. ಬಿಬಿಎಂಪಿ ಕಾಯ್ದೆ ಈ ಸೆಕ್ಷನ್‌ಗಳ ಸಂವಿಧಾನದ ಭಾಗ 9ಎ ಗೆ ತದ್ವಿರುದ್ಧವಾಗಿವೆ. ಹಾಗೂ ಈ ಸೆಕ್ಷನ್‌ಗಳ ಮೂಲಕ ವಾರ್ಡ್ ಸಮಿತಿಯ ಅಧಿಕಾರವನ್ನು ಕಿತ್ತುಕೊಂಡಂತಾಗುತ್ತದೆ. ಬಿಬಿಎಂಪಿ ಕಾಯ್ದೆಯಲ್ಲಿನ ಈ ಸೆಕ್ಷನ್ಗಳು ಜಾರಿಯಾದಲ್ಲಿ ವಾರ್ಡ್ ಸಮಿತಿಗಳಿಗೆ ಯಾವುದೇ ಅಧಿಕಾರ ಇರಲ್ಲ. ಹೀಗಾಗಿ ಕಾಯಿದೆ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.