ಬೆಂಗಳೂರು: ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ನೀಡುವ 'ಸ್ವಯಂ ಉದ್ಯೋಗ ವೈಯಕ್ತಿಕ ಸಾಲ' ಯೋಜನೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ಕಡಿವಾಣ ಹಾಕುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಇಂದು ಸಂಜೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಪ್ರತಿ ಜಿಲ್ಲೆಯಲ್ಲಿ ನೇರ ಸಾಲ ಯೋಜನೆಗೆ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ.ಫಲಾನುಭವಿಗಳಿಗಿಂತ ಮೊದಲೇ ಮಧ್ಯವರ್ತಿಗಳು ಫಲಾನುಭವಿಗಳ ಬಳಿ ಹೋಗುತ್ತಾರೆ. ಈ ಮಧ್ಯವರ್ತಿಗಳ ಹಾವಳಿಗೆ ಮೊದಲು ಕಡಿವಾಣ ಹಾಕಬೇಕು. ನೇರ ಸಾಲದಲ್ಲಿ ನೀಡಲಾಗುವ 50 ಸಾವಿರ ಹಣವನ್ನು ಒಬ್ಬ ಫಲಾನುಭವಿಗೆ ನೀಡಿದರೂ, ಆ ಹಣ ಫಲಾನುಭವಿಗೆ ನೇರ ಉಪಯೋಗಕ್ಕೆ ಬರಬೇಕು. ಈ ಯೋಜನೆಗೆ ಹೊಸ ರೂಪ ನೀಡಿ. ಕಂತಿನ ರೂಪದಲ್ಲಾದರೂ ಫಲಾನುಭವಿಗಳಿಗೆ ಹಣ ತಲುಪುವಂತೆ ಆಗಬೇಕು ಎಂದು ಹೇಳಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯಡಿ ಮೂರು ವರ್ಷದಲ್ಲಿ 19,862 ಕೊಳವೆ ಬಾವಿ ಕೊರೆಯಲು ಗುರಿ ಹಾಕಿಕೊಳ್ಳಲಾಗಿದೆ. ಕೇವಲ ಒಂದು ಸಾವಿರ ಕೊಳವೆ ಬಾವಿ ಕೊರೆದಿರುವುದಕ್ಕೆ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗಂಗಾ ಕಲ್ಯಾಣ ಯೋಜನೆಯಿಂದ ಸಾವಿರಾರು ರೈತರಿಗೆ ಉಪಯೋಗವಾಗಲಿದೆ. ಮೊದಲ ಹಂತದಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಆದ್ಯತೆ ನೀಡಿ, ಹಾಕಿಕೊಂಡಿರುವ ಯೋಜನೆಯಂತೆ ಕೊಳವೆ ಬಾವಿ ಕೊರೆದು ಪೂರ್ಣಗೊಳಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.