ಬೆಂಗಳೂರು:ದುರುದ್ದೇಶ, ವೈಯಕ್ತಿಕ ದ್ವೇಷ ಅಥವಾ ವ್ಯಕ್ತಿಯೊಬ್ಬರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿ ದಾಖಲಿಸುವ ಪ್ರಕರಣಗಳನ್ನು ಕಾನೂನು ಪ್ರಕಾರ ಮುಂದುವರಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ ಮೂಲದ ಮೂವರು ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಈ ಸಂದರ್ಭದಲ್ಲಿ ಕೋರ್ಟ್ ರದ್ದುಪಡಿಸಿ ಆದೇಶಿಸಿತು. ನಾಗಲವಂಚ ಶ್ರೀಧರ್ ರಾವ್, ಎನ್. ಲಕ್ಷ್ಮಣ ರಾವ್ ಮತ್ತು ಕೋಟಾರು ರಾಜಲಕ್ಷ್ಮಿ ಎಂಬವರು, ತಮ್ಮ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಆದೇಶ: ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ದುರುದ್ದೇಶ ಪೂರ್ವಕವಾದ ಪ್ರಕರಣಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ದುರುದ್ದೇಶಪೂರ್ವಕವಾಗಿ ದಾಖಲಿಸಿರುವ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬರ ತಲೆಯ ಮೇಲಿನ ತೂಗು ಕತ್ತಿಯನ್ನು ತೆಗೆದು ಹಾಕುವುದಕ್ಕೆ ನ್ಯಾಯಾಲಯಕ್ಕೆ ಸಿಆರ್‌ಪಿಸಿ 482 ರ ಅಡಿಯಲ್ಲಿ ಅವಕಾಶವಿದೆ. ಇದರಿಂದ ಕಿರುಕುಳ ನೀಡುವುದನ್ನು ತಡೆಯುವುದು ಮತ್ತು ಕಾನೂನಿನ ಪ್ರಕ್ರಿಯೆ ದುರುಪಯೋಗ ತಡೆಯಬಹುದು ಎಂದು ತಿಳಿಸಿದೆ.
ಪ್ರಸ್ತುತ ಪ್ರಕರಣದಲ್ಲಿ ನಾಲ್ವರ ನಡುವೆ ಒಪ್ಪಂದ ಒಮ್ಮತದ ಆಧಾರದಲ್ಲಿ ಆಗಿದೆ. ಇದನ್ನು ವಂಚನೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಪಾಲುದಾರಿಕೆ ಮತ್ತು ಕಾಮಗಾರಿಗೆ ಸಂಬಂಧಿಸಿದಂತೆ ಆಗಿರುವ ಒಪ್ಪಂದಗಳು ಒಮ್ಮತವಾಗಿವೆ. ಹೀಗಾಗಿ ಪ್ರಕರಣದ ಮೊದಲನೇ ಅರ್ಜಿದಾರರು ದೂರುದಾರರಿಗೆ ಅಮಿಷ ಒಡ್ಡಿದ್ದಾರೆ ಎಂದು ಹೇಳಲಾಗದು. ಆದ್ದರಿಂದ ಅರ್ಜಿದಾರರು ದೂರುದಾರರಿಗೆ ವಂಚನೆ ಮಾಡಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಪ್ರಕರಣದ ಪೂರ್ವಾಪರ ಪರಿಶೀಲಿಸಿದರೆ ಯಾವುದೇ ಸತ್ಯಾಂಶ ಇಲ್ಲ. ಹೀಗಾಗಿ ದೂರಿನ ಸಂಬಂಧ ವಿಚಾರಣೆ ನಡೆಸುವುದು ಕ್ರಿಮಿನಲ್ ನ್ಯಾಯವ್ಯವಸ್ಥೆಯ ದುರುಪಯೋಗವಾಗಿದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಮುಂದಿನ ಪ್ರಕ್ರಿಯೆಗಳು ಮುಂದುವರೆಸಲು ಅನುಮತಿ ನೀಡುವುದು ಕಾನೂನು ದುರ್ಬಳಕೆಯಾಗಲಿದೆ ಎಂದು ಪೀಠ ತಿಳಿಸಿತು.
ಇದರ ಜೊತೆಗೆ, ಪ್ರಕರಣದಲ್ಲಿ ದೂರುದಾರರು ಒಪ್ಪಂದದ ಹಣ ಹಿಂದಿರುಗಿಸುವಂತೆ ಕೋರಿ ಲೀಗಲ್ ನೋಟಿಸ್ ಸಹ ಜಾರಿ ಮಾಡಿದ್ದಾರೆ. ಆ ಮೂಲಕ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ, ಈ ಸಂಬಂಧ ಸಿವಿಲ್ ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಹೀಗಿರುವಾಗ ಆಕ್ಷೇಪಾರ್ಹ ಕ್ರಿಮಿನಲ್ ಪ್ರಕ್ರಿಯೆ ಮುಂದುವರೆಸುವುದಕ್ಕೆ ಅನುಮತಿ ನೀಡಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ ಹೀಗಿದೆ..:ಮೈಸೂರಿನ ವಿಜಯ ನಗರದ ನಿವಾಸಿಯಾದ ದೂರುದಾರರಾದ ಚಿನ್ನಂ ಶ್ರೀನಿವಾಸ್ ಹೈದರಾಬಾದ್ ಮೂಲದ ಶ್ರೀಧರ ರಾವ್ ಅವರೊಂದಿಗೆ ಕೆಲ ಕಾಮಗಾರಿಗಳನ್ನು ನಡೆಸುವುದಕ್ಕೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದರು. ಇದಾದ ನಂತರ ಐದು ಮಹಡಿಯ ವಾಣಿಜ್ಯ ಸಂಕೀರ್ಣ ನಿರ್ಮಾಣದ ಉದ್ದೇಶಕ್ಕಾಗಿ ಹೈದರಾಬಾದ್ ಮೂಲದ ಲಕ್ಷ್ಮಣ್ ರಾವ್ ಮತ್ತು ರಾಜಲಕ್ಷ್ಮಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಈ ನಡುವೆ ದೂರುದಾರರಾದ ಚಿನ್ನಂ ಶ್ರೀನಿವಾಸ್ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಮಗಾರಿ ನಿರ್ವಹಿಸಲು ಮಾಸಿಕ 2 ಲಕ್ಷ ರೂ.ಗಳ ವೇತನವನ್ನು ನಿಗದಿ ಮಾಡಿಕೊಂಡಿದ್ದರು.