ಬೆಂಗಳೂರು: ಸಾರ್ವಜನಿಕ ಜೀವನದಲ್ಲಿ ಎಲ್ಲರೂ ಜನಮನ್ನಣೆ ಪಡೆದುಕೊಂಡು ಬಂದಿರುವುದು. ವೈಯಕ್ತಿಕ ನಿಂದನೆ ಸರಿಯಲ್ಲ. ಇದು ಕರ್ನಾಟಕದ ಸಂಸ್ಕೃತಿಯಲ್ಲ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರೋಕ್ಷವಾಗಿ ಯತ್ನಾಳ್ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೈಯಕ್ತಿಕ ನಿಂದನೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಇದನ್ನು ಹೊರತಾಗಿ ಮಾತನಾಡಿದ್ದಾರೆ. ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ಸಚಿವ ಮುರುಗೇಶ್ ನಿರಾಣಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಡುವೆ ವಾಕ್ಸಮರ ಏರ್ಪಟ್ಟಿದ್ದು, ನಿನ್ನೆ ನಿರಾಣಿ ಅವರನ್ನು ಪಿಂಪ್ ಎಂದು ಯತ್ನಾಳ್ ದೂರಿದ್ದರು. ಹೀಗಾಗಿ, ಯತ್ನಾಳ್ ಅವರ ಹೇಳಿಕೆಗೆ ಸಿಎಂ ಇಂದು ಪ್ರತಿಕ್ರಿಯೆ ನೀಡಿದರು.
ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ:ಕಾಂಗ್ರೆಸ್ ನವರಿಗೆ ಅವರು ಹೇಳಿದ ಯಾವುದು ಕಾರ್ಯರೂಪಕ್ಕೆ ಬರುವುದಿಲ್ಲ ಎಂಬುದು ಚೆನ್ನಾಗಿ ಗೊತ್ತಿದೆ. ಆದರೂ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಘೋಷಣೆ ಮಾಡಿದ ಯೋಜನೆಗೆ ಹಣದ ಕೊರತೆಯಾಗುತ್ತದೆ. ಸದಾಶಿವ ಆಯೋಗ, ಕಾಂತರಾಜು ಆಯೋಗ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಹಿಂದುಳಿದ ಆಯೋಗದ ಮಧ್ಯಂತರ ವರದಿಯನ್ನು ಸಂಪುಟದಲ್ಲಿ ಚರ್ಚೆ ಮಾಡಿ ಪ್ರವರ್ಗ 2 ಕ್ಕೆ ಸೇರಿಸಲು ಮುಂದಾಗಿದ್ದೇವೆ. ಹೆಚ್ಚಳ ಮಾಡುವುದಕ್ಕೆ ಸುಪ್ರೀಂಕೋರ್ಟ್ ಮತ್ತು ಸಂವಿಧಾನದಲ್ಲಿ ಕೆಲವು ನಿಯಮಗಳಿವೆ. ಅದನ್ನು ಕೂಡ ಆದಷ್ಟು ಬೇಗ ಮಾಡಲಿದ್ದೇವೆ ಎಂದು ಹೇಳಿದರು.
ಪರೋಕ್ಷವಾಗಿ ವಿಜಯನಂದ ಕಾಶಪ್ಪನವರ್ ವಿರುದ್ಧ ಕಿಡಿಕಾರಿದ ಸಿಎಂ:ಪಂಚಮಸಾಲಿ ಸಮುದಾಯದ ಅಧ್ಯಕ್ಷರಾದ ಕಾಶಪ್ಪನವರ್ ಕೂಡ ಶಾಸಕರಾಗಿದ್ದವರು. ಅವರ ತಂದೆ ಮಂತ್ರಿಯಾಗಿದ್ದರು. ಅವರು ಏಕೆ ಮೀಸಲಾತಿ ಜಾರಿ ಮಾಡಲಿಲ್ಲ ಎಂದು ಬೊಮ್ಮಾಯಿ ಪ್ರಶ್ನಿಸಿದರು. ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ವರದಿಯನ್ನೇ ತಿರಸ್ಕಾರ ಮಾಡಲಾಯಿತು. ಮೀಸಲಾತಿ ಮಾಡೋಕೆ ಬರುವುದಿಲ್ಲ ಎಂದು ಹೇಳಿದ್ದರು. ಆಗ ಯಾಕೆ ಬಾಯಿ ತೆಗೆದು ಮಾತನಾಡಲಿಲ್ಲ. ಈಗ ಅವರಿಗೆ ಯಾವ ನೈತಿಕತೆ ಇದೆ ಎಂದು ಪರೋಕ್ಷವಾಗಿ ವಿಜಯನಂದ ಕಾಶಪ್ಪನವರ್ ವಿರುದ್ಧ ಕಿಡಿಕಾರಿದರು. ಅವರ ಅಕ್ಕಪಕ್ಕ ಯಾರಿದ್ದಾರೆ ಎಂದು ಸ್ವಾಮೀಜಿ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.