ಬೆಂಗಳೂರು:ಪತ್ನಿಯ ಸ್ನೇಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವ ಆಕೆ ಪರಪುರುಷನೊಂದಿಗೆ ಓಡಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಲಾಡ್ಜ್‌ಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಒಡಿಶಾ ಮೂಲದ ದೀಪಾ ಬದನ್ ಕೊಲೆಯಾದ ಯುವತಿ. ಹತ್ಯೆ ಆರೋಪಿ ಅನ್ಮಲ್ ರತನ್ ಕಂದರ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕೈಗೊಂಡಿದ್ದಾರೆ. ಯಶವಂತಪುರ ರೈಲ್ವೆ ಠಾಣೆ ಬಳಿ ಬೆಂಗಳೂರು ರೆಸಿಡೆನ್ಸಿ ಲಾಡ್ಜ್ನಲ್ಲಿ ಜೂನ್ 9ರಂದು ಯುವತಿ ಕೊಲೆಯಾಗಿದ್ದಳು. ಮಾರನೇ ದಿನ ಪೊಲೀಸರಿಗೆ ವಿಷಯ ಗೊತ್ತಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿ ಅನ್ಮಲ್ ಎರಡು ವರ್ಷಗಳ ಹಿಂದೆ ದೀಪಾ ಬದನ್ಳ ಸ್ನೇಹಿತೆಯನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದ. ಬೆಂಗಳೂರಿನ ಜೀವನ್‌ಭೀಮಾನಗರದಲ್ಲಿ ದಂಪತಿ ವಾಸವಿದ್ದರು. ಕೊಲೆಯಾದ ದೀಪಾ ಹಾಗೂ ಆರೋಪಿಯ ಹೆಂಡತಿ ಒಡಿಶಾದಲ್ಲಿ ಕಾಲೇಜು ಸಹಪಾಠಿಗಳು. ಇದೇ ಪರಿಚಯದ ಮೇರೆಗೆ ದೀಪಾ ಕೂಡ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.