ಕರ್ನಾಟಕ

karnataka

ETV Bharat / state

ಕಾರಿನಲ್ಲಿ ವ್ಯಕ್ತಿ ಸಜೀವ ದಹನ ಪ್ರಕರಣ: ಅರ್ಧ ಸುಟ್ಟ ಉಡುಪಿನಿಂದ ಗುರುತು ಪತ್ತೆ

ಕಾರಿ​ನಲ್ಲಿ ವ್ಯಕ್ತಿ ಸಜೀವ ದಹನ ಪ್ರಕರಣದಲ್ಲಿ ಅರ್ಧ ಸುಟ್ಟಿದ್ದ ಉಡುಪಿನಿಂದ ಕುಟುಂಬಸ್ಥರು ಗುರುತು ಪತ್ತೆ ಹಚ್ಚಿದ್ದಾರೆ.

A case of burning a person alive in a car
ಕಾರ್​ನಲ್ಲಿ ವ್ಯಕ್ತಿ ಸಜೀವ ದಹನ ಪ್ರಕರಣ

By

Published : Apr 5, 2023, 6:58 PM IST

ಬೆಂಗಳೂರು:ಕೊಡಿಗೆಹಳ್ಳಿ‌ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿನಗರದ ಮುಖ್ಯರಸ್ತೆಯ ಕಸ ಹಾಕುವ ಜಾಗದ ಬದಿ‌ ನಿಂತಿದ್ದ ಪೋರ್ಡ್ ಕಾರಿನೊಳಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವದ ಗುರುತನ್ನು ಕುಟುಂಬಸ್ಥರ ನೆರವಿನಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ ವಿನೋದ್ ಎಂಬವರದ್ದಾಗಿದೆ. ಕುಡಿದ ನಶೆಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಕಾರಿನಲ್ಲಿ​ ಸೊಳ್ಳೆ ಬತ್ತಿಯಿಂದ ಅಂಟಿಸಲಾಗಿದ್ದ ಬೆಂಕಿಯಿಂದ ತಗುಲಿದ ಅವಘಡದಲ್ಲಿ ವಿನೋದ್ ಮೃತಪಟ್ಟಿರುವುದು ಗೊತ್ತಾಗಿದೆ.

ಕುತೂಹಲಕಾರಿ ವಿಷ್ಯವೆಂದರೆ, ಮೃತದೇಹದ ಗುರುತನ್ನು ಆ ವ್ಯಕ್ತಿಯ ಅರ್ಧ ಸುಟ್ಟಿದ್ದ ಚಡ್ಡಿಯಿಂದಲೇ ಪತ್ತೆ ಮಾಡಲಾಗಿದೆ. ವಿನೋದ್ ವಿವಾಹಿತನಾಗಿದ್ದು, ದೊಡ್ಡಬೊಮ್ಮಸಂದ್ರ ನಿವಾಸಿ. ಕೌಟುಂಬಿಕ ಕಾರಣಕ್ಕಾಗಿ ಹೆಂಡ್ತಿಯಿಂದ ದೂರವಾಗಿದ್ದರು. ತನ್ನ ತಾಯಿಯೊಂದಿಗೆ ವಾಸವಾಗಿದ್ದರು. ಮದ್ಯ ವ್ಯಸನಿಯಾಗಿದ್ದು ಪ್ರತಿದಿನವೂ ಕುಡಿಯುವ ಪ್ರವೃತ್ತಿ ಬೆಳೆಸಿಕೊಂಡಿದ್ದ‌‌ರಂತೆ.‌ ಕುಡಿದಾಗ ಪ್ರತಿದಿನವೂ ಮನೆಗೆ ಬರುತ್ತಿರಲಿಲ್ಲ. ಮಾರ್ಚ್ 29ರಂದು ರಾತ್ರಿ ಕುಡಿದ ಗುಂಗಿನಲ್ಲಿ ದೇವಿನಗರ ಬಳಿಯ ರಸ್ತೆ ಬದಿ ನಿಲ್ಲಿಸಲಾಗಿದ್ದ ಗುಜರಿಗೆ ಹಾಕುವ ಸ್ಥಿತಿಯಲ್ಲಿದ್ದ ಪೋರ್ಡ್ ಕಾರಿನಲ್ಲಿ ಒಳಹೋಗಿದ್ದರು. ಈ ಮಧ್ಯೆ ಕಾರಿನಲ್ಲಿ​ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡಿತ್ತು. ವಿನೋದ್ ಮಲಗಿದ್ದ ಜಾಗದಲ್ಲಿಯೇ ಸಜೀವ ದಹನವಾಗಿದ್ದಾನೆ.

ಕೃತ್ಯ ನಡೆದ ಸ್ಥಳದಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ವಿನೋದ್ ಕಾರಿನಲ್ಲಿ ಒಳ ಹೋಗಿರುವುದು ಕಂಡುಬಂದಿತ್ತು. ಸತತ ಶೋಧ ಬಳಿಕವೂ ಕುಟುಂಬಸ್ಥರನ್ನು ಪತ್ತೆ ಹಚ್ಚಿದ ಪೊಲೀಸರು ಆತ ಧರಿಸಿದ್ದ ಚಡ್ಡಿಯಿಂದ ಗುರುತು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಟೆಕ್ಕಿಗಳಿಂದ ಥಳಿತ, ವ್ಯಕ್ತಿ ಸಾವು:ರಸ್ತೆಯಲ್ಲಿ ಜೋರಾಗಿ ಹಾಕಿದ್ದ ಹಾಡಿನ ಸೌಂಡ್ ಕಡಿಮೆ ಮಾಡಲು‌ ಹೇಳಿದ್ದಕ್ಕೆ ಟೆಕ್ಕಿಗಳಿಂದ ಥಳಿತಕ್ಕೊಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಎಚ್ಎಎಲ್ ಠಾಣಾ ವ್ಯಾಪ್ತಿಯ ವಿಜ್ಞಾನ ನಗರದಲ್ಲಿ ತಡರಾತ್ರಿ ವರದಿಯಾಗಿದೆ. ಲಾಯೆಡ್ ನೇಮಯ್ಯ ಮೃತ ವ್ಯಕ್ತಿ. ಒಡಿಷಾ ಮೂಲದ ರಾಮ್ ಸಮಂತ್ರೆ, ಬಸುದೇವ್ ಸಮಂತ್ರೆ, ಅನಿರುದ್ಧ್ ಸೇರಿದಂತೆ ನಾಲ್ವರ ವಿರುದ್ಧ ಹತ್ಯೆಗೈದ ಆರೋಪ ಕೇಳಿ ಬಂದಿದ್ದು, ಎಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಏಪ್ರಿಲ್ 2 ರಂದು ಬೆಳಗ್ಗಿನ ಜಾವ 4.30ರ ಸುಮಾರಿಗೆ ವಿಜ್ಞಾನ ನಗರದ ಖಾಸಗಿ ಅಪಾರ್ಟ್‌ಮೆಂಟ್ ಮುಂದಿನ ರಸ್ತೆಯಲ್ಲಿ ಜೋರಾದ ಸೌಂಡ್​ನಲ್ಲಿ ಹಾಡು ಹಾಕಿಕೊಂಡಿದ್ದಾಗ, ಲಾಯೆಡ್ ನೇಮಯ್ಯ ಬಂದು 'ಸೌಂಡ್ ಕಡಿಮೆ ಮಾಡಿ, ಮನೆಯಲ್ಲಿ ವಯಸ್ಸಾದವರು ಇದ್ದಾರೆ' ಎಂದು ಹೇಳಿದ್ದರು. ಈ ವೇಳೆ ಲಾಯೆಡ್ ಜೊತೆ ಗಲಾಟೆ ಮಾಡಿದ್ದ ಆರೋಪಿಗಳು ಆತನನ್ನು ಥಳಿಸಿ, ಕಲ್ಲು, ಚಪ್ಪಲಿಗಳಿಂದ ಹಲ್ಲೆ ಮಾಡಿದ್ದರಂತೆ. ಹಲ್ಲೆಗೊಳಗಾದ ಲಾಯೆಡ್ ಮತ್ತು ಆರೋಪಿಗಳು ಎಚ್ಎಎಲ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿದ್ದರು. ಗಲಾಟೆ ಬಳಿಕ ಅಸ್ಪತ್ರೆಯಲ್ಲಿ ದಾಖಲಾಗಿದ್ದ ಲಾಯೆಡ್ ನೇಮಯ್ಯ ತಡರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಎಚ್ಎಎಲ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಪ್ರಕರಣದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:ತಮಿಳುನಾಡು: ಪುಣ್ಯಸ್ನಾನಕ್ಕೆ ಕಲ್ಯಾಣಿಗಿಳಿದ ಐವರು ಸಾವು

ABOUT THE AUTHOR

...view details