ಕರ್ನಾಟಕ

karnataka

ETV Bharat / state

ಸುರಕ್ಷತಾ ಕ್ರಮ‌ ಅನುಸರಿಸದೆ ಪಟಾಕಿ ಮಳಿಗೆಗೆ ಅನುಮತಿ: ಹೈಕೋರ್ಟ್ ಅಸಮಾಧಾನ - High court on firecrackers ban

ಕಾನೂನು ಬಾಹಿರವಾಗಿ ಪಟಾಕಿ ದಾಸ್ತಾನು ಮತ್ತು ಮಾರಾಟಕ್ಕೆ ಏಕೆ ಪರವಾನಗಿ ಕೊಡುತ್ತಿದ್ದೀರಿ? ದೀಪಾವಳಿ ಹಬ್ಬದಲ್ಲಿ ನಿಮಗೆ ಅನುಕೂಲವಾಗಲೆಂದು ಈ ರೀತಿ ಪರವಾನಗಿ ನೀಡುತ್ತೀರಾ? ಕಂದಾಯ ನಿರೀಕ್ಷಕರು ಏಕೆ ದಾಸ್ತಾನು ಮಳಿಗೆಗೆ ಬೀಗ ಹಾಕಿದ್ದಾರೆ? ಅವರಿಗೆ ಯಾವ ಅಧಿಕಾರವಿದೆ? ಎಂದು ಸರ್ಕಾರವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತು.

high court
ಹೈಕೋರ್ಟ್

By ETV Bharat Karnataka Team

Published : Nov 9, 2023, 7:14 AM IST

ಬೆಂಗಳೂರು: ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಪಟಾಕಿ ದಾಸ್ತಾನಿಗೆ ಪರವಾನಗಿ ನೀಡಿರುವ ಅಧಿಕಾರಿಗಳ ಕ್ರಮವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸುರಕ್ಷತಾ ಕ್ರಮ ಅನುಸರಿಸದ ಹಿನ್ನೆಲೆಯಲ್ಲಿ ನಗರದ ವಿವಿಧ ಪಟಾಕಿ ದಾಸ್ತಾನು ಮತ್ತು ಮಾರಾಟ ಮಳಿಗೆಗಳಿಗೆ ಬೀಗ ಹಾಕಿರುವ ಕಂದಾಯ ನಿರೀಕ್ಷಕರ ಕ್ರಮ ಪ್ರಶ್ನಿಸಿ ಎಂದು ಹಲವು ಪಟಾಕಿ ಮಾರಾಟಗಾರರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಪಟಾಕಿ ದಾಸ್ತಾನಿಗೆ ಅನುಮತಿ ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸುವ ಇಂಗಿತ ವ್ಯಕ್ತಪಡಿಸಿದೆ.

ಕೋರ್ಟ್‌ ಸೂಚನೆ ಮೇರೆಗೆ ಸ್ಫೋಟಕಗಳ ಮುಖ್ಯ ನಿಯಂತ್ರಣಾ ಅಧಿಕಾರಿಯು ಅರ್ಜಿದಾರರ ಪಟಾಕಿ ದಾಸ್ತಾನು ಹಾಗೂ ಮಾರಾಟ ಮಳಿಗೆಯ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಆ ವರದಿಗಳನ್ನು ನ್ಯಾಯಪೀಠಕ್ಕೆ ಒದಗಿಸಿದ ಕೇಂದ್ರ ಸರ್ಕಾರದ ಸಹಾಯಕ ಸಾಲಿಸಿಟರ್‌ ಜನರಲ್‌ ಶಾಂತಿಭೂಷಣ್‌ ಅವರು, ಜಿಲ್ಲಾಧಿಕಾರಿಗಳು ಪಟಾಕಿ ದಾಸ್ತಾನಿಗೆ ಅನುಮತಿ ನೀಡಿರುವ ಹಲವು ಪ್ರಕರಣಗಳಲ್ಲಿ ಸ್ಫೋಟಕಗಳ ಕಾಯ್ದೆ-1984ರ ನಿಯಮಗಳು ಉಲ್ಲಂಘನೆಯಾಗಿವೆ. 500 ಕಿ.ಜಿ ವರೆಗೂ ಪಟಾಕಿ ದಾಸ್ತಾನು ಮಾಡಲು ಜಿಲ್ಲಾಧಿಕಾರಿ ಪರವಾನಗಿ ನೀಡಲು ಅವಕಾಶವಿದೆ. ಆದರೆ, ಅದಕ್ಕಿಂತ ಹೆಚ್ಚು ಪ್ರಮಾಣ ಪಟಾಕಿ ದಾಸ್ತಾನಿಗೂ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆದರೆ, ಪಟಾಕಿ ದಾಸ್ತಾನು ಇರಿಸಿದ ಮತ್ತು ಮಾರಾಟ ಮಾಡುವ ಜಾಗ, ಇತರೆ ಅಂಗಡಿ, ಮನೆಗಳು ನಡುವೆ 15 ಮೀಟರ್‌ ಅಂತರವಿರಬೇಕು. ದಾಸ್ತಾನು ಮಾಹಿತಿ ನಿರ್ವಹಣೆ ಮಾಡಬೇಕು. ಅಗ್ನಿ ಸುರಕ್ಷತೆ ಕ್ರಮ ಕೈಗೊಳ್ಳಬೇಕು. ಕೆಲ ಪ್ರಕರಣಗಳಲ್ಲಿ ನಿಯಮ ಮೀರಿ ಪರವಾನಗಿ ನೀಡಿದ್ದರೆ, ಅಧಿಕಾರ ವ್ಯಾಪ್ತಿ ಮೀರಿ ಕಂದಾಯ ನಿರೀಕ್ಷಕರು ಪಟಾಕಿ ದಾಸ್ತಾನು ಮಳಿಗೆಗೆ ಬೀಗ ಹಾಕಿದ್ದಾರೆ ಎಂದು ಅವರು ಪೀಠದ ಗಮನಕ್ಕೆ ತಂದರು.

ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಪ್ರತಿವರ್ಷ ದೀಪಾವಳಿ ಹಬ್ಬ ಸಮೀಪಿಸಿದಾಗ ಇದೇ ವರ್ತನೆ ಪುನರಾವರ್ತನೆಯಾಗುತ್ತಿದೆ. ಕಾನೂನು ಬಾಹಿರವಾಗಿ ಪಟಾಕಿ ದಾಸ್ತಾನು ಮತ್ತು ಮಾರಾಟಕ್ಕೆ ಏಕೆ ಪರವಾನಗಿ ಕೊಡುತ್ತಿದ್ದೀರಿ? ದೀಪಾವಳಿ ಹಬ್ಬದಲ್ಲಿ ನಿಮಗೆ ಅನುಕೂಲವಾಗಲೆಂದು ಈ ರೀತಿ ಪರವಾನಗಿ ನೀಡುತ್ತೀರಾ? ಕಂದಾಯ ನಿರೀಕ್ಷಕರು ಏಕೆ ದಾಸ್ತಾನು ಮಳಿಗೆಗೆ ಬೀಗ ಹಾಕಿದ್ದಾರೆ? ಅವರಿಗೆ ಯಾವ ಅಧಿಕಾರವಿದೆ? ಪಟಾಕಿ ಏನಾದರೂ ಅವರಿಗೆ ಬೇಕಿತ್ತಾ ಎಂದು ಕಟುವಾಗಿ ಕೋರ್ಟ್ ಪ್ರಶ್ನಿಸಿತು. ಅಲ್ಲದೆ, ಪಟಾಕಿ ದಾಸ್ತಾನಿಗೆ ಅನುಮತಿ ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details