ಬೆಂಗಳೂರು :ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ವಿವಾಹ ಸಮಾರಂಭಕ್ಕೆ ಅಧಿಕಾರಿಗಳು ಅನುಮತಿ ನೀಡಿ ತಪ್ಪೆಸಗಿದ್ದಾರೆ. ಈ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಮತ್ತು ಸಮರ್ಥಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ನಿಖಿಲ್ ಮದುವೆಗೆ ಅನುಮತಿ : ಅಧಿಕಾರಿಗಳ ಕ್ರಮಕ್ಕೆ ಹೈಕೋರ್ಟ್ ಬೇಸರ - ನಿಖಿಲ್ ಮದುವೆಗೆ ಅನುಮತಿ
ನಿಖಿಲ್ ಮದುವೆ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಎಚ್.ಡಿ.ಕುಮಾರಸ್ವಾಮಿ ರಾಮನಗರ ಜಿಲ್ಲಾಧಿಕಾರಿಗೆ ನೀಡಿದ್ದ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಈ ಕುರಿತು ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು, ನಿಖಿಲ್ ಮದುವೆ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಎಚ್.ಡಿ.ಕುಮಾರಸ್ವಾಮಿ ರಾಮನಗರ ಜಿಲ್ಲಾಧಿಕಾರಿಗೆ ನೀಡಿದ್ದ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಬಳಿಕ ವಿವರಣೆ ನೀಡಿ, ಕುಮಾರಸ್ವಾಮಿ ಅವರು ತಮ್ಮ ಪುತ್ರನ ವಿವಾಹ ಸಮಾರಂಭಕ್ಕೆ ಅನುಮತಿ ಕೋರಿ ರಾಮನಗರ ಜಿಲ್ಲಾಧಿಕಾರಿಗೆ ಪತ್ರ ನೀಡಿದ್ದರು. ವಿವಾಹದಲ್ಲಿ ನೂರು ಜನ ಮಾತ್ರ ಭಾಗವಹಿಸುವುದಾಗಿ ತಿಳಿಸಿದ್ದರು. ಆ ಪತ್ರ ಆಧರಿಸಿ ಜಿಲ್ಲಾಧಿಕಾರಿ ವಿವಾಹಕ್ಕೆ ಅನುಮತಿ ನೀಡಿದ್ದರು. ಆದರೆ, ವಾಹನ ಪಾಸ್ ವಿತರಿಸಿಲ್ಲ ಎಂದು ಸರ್ಕಾರಿ ವಕೀಲರು ಮಾಹಿತಿ ನೀಡಿದರು.
ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಪೀಠ, ವಿವಾಹಕ್ಕೆ ಅನುಮತಿ ನೀಡಿದ ಹಾಗೂ ವಾಹನಗಳಿಗೆ ಪಾಸ್ ವಿತರಿಸಿದ ಬಗ್ಗೆ ಮಾಹಿತಿ ಒದಗಿಸುವಂತೆ ಏ. 21 ರಂದೇ ನಿರ್ದೇಶಿಸಿತ್ತು. ಇದು ಪ್ರಕರಣದ ಕುರಿತ ನಾಲ್ಕನೇ ವಿಚಾರಣೆಯಾಗಿದೆ. ಸರ್ಕಾರದ ಮಾಹಿತಿ ಪ್ರಕಾರ ಎಚ್.ಡಿ.ಕುಮಾರಸ್ವಾಮಿ ವಿವಾಹಕ್ಕೆ ಅನುಮತಿ ಕೋರಿ ಏ. 15 ರಂದೇ ಪತ್ರ ನೀಡಿದ್ದಾರೆ. ಹಾಗಿದ್ದೂ ಈ ವರೆಗೆ ಸಲ್ಲಿಸದ ಪತ್ರವನ್ನು ಇಂದು ನ್ಯಾಯಾಲಯಕ್ಕೆ ಒದಗಿಸಿದ್ಧೀರಿ. ಸರ್ಕಾರದ ನಡೆ ಅನುಮಾನಾಸ್ಪದವಾಗಿದೆ. ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಇದನ್ನು ಒಪ್ಪಿಕೊಳ್ಳದ ಸರ್ಕಾರ ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಸೂಕ್ತ ನಡವಳಿಕೆ ಅಲ್ಲ. ಮುಂದೆ ಹೀಗಾಗದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಸೂಚಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.