ಬೆಂಗಳೂರು: ಖಾಸಗಿ ಏಜನ್ಸಿಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಾತಿಯಿಂದ ಸಾಮಾಜಿಕ ನ್ಯಾಯಕ್ಕೆ ಹೊಡೆತ ಬೀಳುತ್ತಿದ್ದು, ಆದಷ್ಟು ಬೇಗ ಗುತ್ತಿಗೆ ಆಧಾರಿತ ಬದಲು ಹುದ್ದೆಗಳ ಕಾಯಂ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಮಂಜೂರಾದ ಹುದ್ದೆ, ಇದರಲ್ಲಿ ಹಾಲಿ ಕಾರ್ಯನಿರ್ವಹಿಸಿತ್ತಿರುವ ಹುದ್ದೆ, ಖಾಲಿ ಹುದ್ದೆ, ನೇಮಕಾತಿ ವಿಳಂಬ ಕುರಿತು ಸದಸ್ಯ ಎಸ್.ವಿ.ಸಂಕನೂರು ಪ್ರಶ್ನೆಗೆ ಉತ್ತರಿಸಿದ ಅವರು, ನೇಮಕಾತಿ ಪ್ರಕ್ರಿಯೆಗೆ ನ್ಯಾಯಾಲಯದಲ್ಲಿ ತಡೆ ಇದೆ. ಅಂತಿಮ ಆದೇಶ ಬಂದ ನಂತರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದರು.
ಹೊರಗುತ್ತಿಗೆ ಅನಿವಾರ್ಯತೆ ಇದ್ದಲ್ಲಿ ಮಾತ್ರ ತೆಗೆದುಕೊಂಡಿದ್ದೇವೆ. 900ಕ್ಕೂ ಹೆಚ್ಚು ಸಿಬ್ಬಂದಿ ನೇಮಕವಾಗಲಿದ್ದಾರೆ. ಎರಡು ಮೂರು ತಿಂಗಳಿನಲ್ಲಿ ನೇಮಕಾತಿ ಮುಗಿಯಲಿದೆ. ನಂತರ ಹೊರಗುತ್ತಿಗೆ ನಿಲ್ಲಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸದಸ್ಯ ಮಹಾಂತೇಶ ಕಮಟಗಿಮಟ, ಹೊರಗುತ್ತಿಗೆಯಿಂದ ಅರ್ಹ ಅಭ್ಯರ್ಥಿಗೆ ಅನ್ಯಾಯವಾಗಲಿದೆ. ಜೊತೆಗೆ ಕಂಪನಿಗಳು ಮಂಜೂರಾದ ಹಣವನ್ನು ಕೆಲಸ ಮಾಡುವವರಿಗಿಂತ ಹೆಚ್ಚು ತಾವೇ ಇರಿಸಿಕೊಳ್ಳಲಿವೆ. ಇದರಿಂದ ಸಿಬ್ಬಂದಿಗೆ ಶೋಷಣೆಯಾಗಲಿದೆ. ಹಾಗಾಗಿ ಕಾಯಂ ಹುದ್ದೆ ನೇಮಕ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಕಾರಜೋಳ, ಕಳೆದ 20 ವರ್ಷದಿಂದ ಇಲಾಖೆ ಬೈಫರ್ಗೇಷನ್ ಮಾಡಿರಲಿಲ್ಲ. ಲೋಕೋಪಯೋಗಿ ಇಲಾಖೆಯೇ ಮಾತೃ ಇಲಾಖೆಯಾಗಿತ್ತು. ಈಗ ನೀರಾವರಿ, ಆರ್ಡಿಪಿಆರ್ ಪ್ರತ್ಯೇಕ ನೇಮಕಾತಿ ಮಾಡಿಕೊಳ್ಳುತ್ತಿವೆ. ಆದಷ್ಟು ಬೇಗ ಇಲಾಖೆ ಬೈಫರ್ಗೇಷನ್ ಪ್ರಕ್ರಿಯೆ ಮುಗಿಯಲಿದೆ ಎಂದರು.
ಹೊರಗುತ್ತಿಗೆಯಿಂದ ಸಾಮಾಜಿಕ ನ್ಯಾಯಕ್ಕೆ ಹೊಡೆತ ಬೀಳುತ್ತಿದೆ. ಎಸ್ಸಿ, ಎಸ್ಟಿ ಜನರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಸದ್ಯದ ಹೊರಗುತ್ತಿಗೆ ಕೂಡ ನಮ್ಮ ಮೀಸಲಾತಿ ವ್ಯವಸ್ಥೆಯಲ್ಲೇ ತೆಗೆದುಕೊಳ್ಳಲು ಕ್ರಮ ವಹಿಸಲಾಗಿದೆ. ಹೊರಗುತ್ತಿಗೆಯಿಂದ ನಡೆಯುವ ಅವ್ಯವಹಾರ ಗಮನಕ್ಕೆ ಬಂದ ನಂತರ ಸಭೆ ನಡೆಸಲಾಗಿದೆ. ಗುತ್ತಿಗೆ ಅವಧಿ ಮುಗಿದ ನಂತರ ಖಾಸಗಿ ಸಂಸ್ಥೆ ಬಿಟ್ಟು ಸರ್ಕಾರಿ ಸಂಸ್ಥೆಯಿಂದಲೇ ಹೊರಗುತ್ತಿಗೆ ಅಡಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಡಿಸಿಎಂ ಕಾರಜೋಳ ಭರವಸೆ ನೀಡಿದರು.