ಶಿವಮೊಗ್ಗ: 10ರಿಂದ 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ 5 ಸಾವಿರ ಶುಶ್ರೂಷಕರನ್ನು ಕಾಯಂಗೊಳಿಸುವಂತೆ, ಇಲ್ಲವೇ ಸಮಾನ ವೇತನ ನೀಡುವಂತೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
5 ಸಾವಿರ ಶುಶ್ರೂಷಕರನ್ನು ಕಾಯಂ ಮಾಡಿ: ಆಯನೂರು ಮಂಜುನಾಥ್ ಆಗ್ರಹ - ಆಯನೂರು ಮಂಜುನಾಥ್
ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಕಳೆದ 10ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಮಾರು 5 ಸಾವಿರ ಶುಶ್ರೂಷಕರನ್ನು ಕಾಯಂ ಮಾಡುವಂತೆ, ಇಲ್ಲವೆ ಸಮಾನ ವೇತನ ನೀಡುವಂತೆ ಎಂಎಲ್ಸಿ ಆಯನೂರು ಮಂಜುನಾಥ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ಜಿಲ್ಲಾ, ತಾಲೂಕು ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಯೊಂದು ಯೋಜನೆಗಳಲ್ಲಿ ಶುಶ್ರೂಷಕರು ನಿಸ್ವಾರ್ಥತತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.
ವೈದ್ಯಕೀಯ ಕಾಲೇಜುಗಳಲ್ಲಿ ಶುಶ್ರೂಷಕರಿಗೆ ಮೂಲ ವೇತನವನ್ನು ನೀಡದೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೂಂದು ಕಣ್ಣಿಗೆ ಸುಣ್ಣದ ರೀತಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ ಎಂದರು. ರೋಗಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಾ ಅಸುನೀಗಿರುವ ಉದಾರಣೆಗಳಿವೆ. ಇದರಿಂದ ಸರ್ಕಾರ ಹೊಸ ನೇಮಕಾತಿ ಮಾಡುವಾಗ ಮೊದಲ ಆದ್ಯತೆ ಗುತ್ತಿಗೆ ನೌಕರರಿಗೆ ನೀಡಲಿ ಎಂದು ಆಗ್ರಹಿಸಿದ್ದಾರೆ.