ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ್ದಾರೆ. ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಕಳೆದ ವರ್ಷದ ಸಾಧನೆಗಳು, ಎದುರಿಸಿದ ಸವಾಲುಗಳು, ಕ್ರಮಿಸಬೇಕಾದ ಹಾದಿಗಳು ಹಾಗೂ ಇನ್ನೂ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರು, ಸಚಿವರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯ ದಕ್ಷತೆಯಿಂದ, ಹತ್ತು ಹಲವು ಸವಾಲುಗಳನ್ನು, ಸಮರ್ಥವಾಗಿ ಎದುರಿಸಲು ಸಹಾಯವಾಯಿತು ಎಂದು ಹೇಳಿದರು.
ಈ ವೇಳೆ ಮಾತನಾಡಿದ ಸಚಿವರು, ಪೊಲೀಸ್ ಸಿಬ್ಬಂದಿಗಳು, ಹಗಲಿರುಳು ಶ್ರಮಿಸಿದ ಫಲವಾಗಿ, ಅತ್ಯುತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಸರಕಾರಕ್ಕೂ ಒಳ್ಳೆಯ ಹೆಸರು ಬಂದಿದೆ. ಕಳೆದ ಒಂದು ವರ್ಷದಲ್ಲಿ, ಗೃಹ ಇಲಾಖೆಯ ಕಾರ್ಯದಕ್ಷತೆ ಹೆಚ್ಚಿಸಲು ಸರಕಾರವೂ ಆದ್ಯತೆ ನೀಡಿದೆ. ಒಂದು ಲಕ್ಷ ಸಿಬ್ಬಂದಿ ಹೊಂದಿದ, ಗೃಹ ಇಲಾಖೆ, ಎಲ್ಲಾ ಸವಾಲುಗಳನ್ನೂ ಯಶಸ್ವಿಯಾಗಿ ನಿಭಾಯಿಸಿದೆ. ನೇಮಕಾತಿ ಹಗರಣವನ್ನು ಬಯಲುಗೊಳಿಸಿ, ಇಲಾಖೆಗೆ ಭ್ರಷ್ಟ ಅಧಿಕಾರಿಗಳ ಸೇರ್ಪಡೆಗೆ ತಡೆಯೊಡ್ಡಿದಂತಹ ಘಟನೆಯೂ ನಡೆದಿದೆ ಎಂದರು.
ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ, ಆತ್ಮ ವಿಶ್ವಾಸ ಹೆಚ್ಚಿಸುವ ಪೂರಕ ಕಾರ್ಯಕ್ರಮಗಳಿಗೆ, ಆದ್ಯತೆ ನೀಡಿದ್ದು, ತೃಪ್ತಿ ತಂದಿದೆ. ಗೃಹ ಇಲಾಖೆಯ ಕಾರ್ಯದಕ್ಷತೆ ಹೆಚ್ಚಿಸಲು ಪೋಲಿಸ್ ಸಿಬ್ಬಂದಿಗಳಿಗೆ ಉತ್ತಮ ವಸತಿ ಗೃಹಗಳು, ಕರ್ತವ್ಯ ನಿರ್ವಹಿಸಲು ಅತ್ಯುತ್ತಮ ಕಟ್ಟಡಗಳು ಹಾಗೂ ಇನ್ನಿತರ ಮೂಲ ಸೌಕರ್ಯ ಅಭಿವೃದ್ಧಿ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಕಳೆದ ವರ್ಷದಲ್ಲಿ, ಸರ್ಕಾರ ಮತಾಂತರ ನಿಷೇಧ ಹಾಗೂ ಗೋ ವಧೆ ನಿಷೇಧ ಕಾಯ್ದೆಗಳನ್ನು ಬಲ ಗೊಳಿಸಲು ಕ್ರಮ ಕೈಗೊಂಡಿದೆ. ಆದರೆ ಅದರ ಅನುಷ್ಠಾನ ಸಮರ್ಪಕವಾಗಿ ಆಗಬೇಕಿದೆ. ಬೀಟ್ ವ್ಯವಸ್ಥೆ ಇನ್ನಷ್ಟು ಚುರುಕು ಗೊಳ್ಳಬೇಕು. ವಿಧಾನ ಸಭಾ ಚುನಾವಣೆಯಲ್ಲಿ ಹತ್ತಿರವಿರುವುದರಿಂದ ಇನ್ನಷ್ಟು ಎಚ್ಚರಿಕೆಯಿಂದ ಸವಾಲುಗಳನ್ನೂ ಎದುರಿಸಲು ಸಿದ್ಧರಾಗಬೇಕಿದೆ ಎಂದು ಸೂಚನೆ ನೀಡಿದರು.