ಬೆಂಗಳೂರು:ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕಾಗಿ ಇದೀಗ ರಾಜ್ಯದಲ್ಲಿ ದಿನಕ್ಕೆ 1 ಲಕ್ಷ ಆರ್ಟಿ-ಪಿಸಿಆರ್ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಆರ್ಟಿ-ಪಿಸಿಆರ್ ಮತ್ತು ಆರ್ಎಟಿ ಕೋವಿಡ್ ಪರೀಕ್ಷೆ ನಡೆಸಲು ಜಿಲ್ಲಾವಾರು ಗುರಿಯನ್ನು 70,500ಕ್ಕೆ ಇಳಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಉಂಟಾಗುತ್ತಿರುವ ಹಿನ್ನೆಲೆ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಹಾಗೂ ಸರ್ಕಾರದ ಸೂಚನೆಯಂತೆ ರಾಜ್ಯದ ಒಟ್ಟು ಕೊರೊನಾ ಪರೀಕ್ಷಾ ಗುರಿಯನ್ನು ದಿನಕ್ಕೆ 1ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.
ಪ್ರಸ್ತುತ ಒಟ್ಟಾರೆ ಆರ್ಟಿ-ಪಿಸಿಆರ್ ಗುರಿಯಲ್ಲಿ ಪ್ರಾಥಮಿಕ, ಕೌಟುಂಬಿಕ ಸಂಪರ್ಕಿತರು (ಅಂದಾಜು-4), ILI- SARI ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲಾ ರೋಗ ಲಕ್ಷಣ ರಹಿತ ಪ್ರಕರಣಗಳ ಮಾದರಿಗಳನ್ನು ಪೂಲಿಂಗ್ (pooling) ಮೂಲಕ ಪರೀಕ್ಷಿಸುವಂತೆ ಸೂಚಿಸಲಾಗಿದೆ.
pooling ಆಧಾರಿತ ಮಾದರಿ ಪರೀಕ್ಷೆಗೆ ಜಿಲ್ಲಾವಾರು ಅಂದಾಜು ಗುರಿಯನ್ನು ಹಾಗೂ ಕೋವಿಡ್ ಪ್ರಯೋಗಾಲಯಗಳ ಬದಲಾದ ಪರೀಕ್ಷಾ ಸಾಮರ್ಥ್ಯದ ಆಧಾರದ ಮೇಲೆ ಪ್ರಯೋಗಶಾಲಾ ಮ್ಯಾಪಿಂಗ್ನ್ನು ಮರು ಪರಿಷ್ಕರಿಸಬೇಕಾಗುತ್ತದೆ. ಬಳಿಕ ಪ್ರಯೋಗಶಾಲೆಗೆ ಮಾದರಿಗಳನ್ನು ಕಳುಹಿಸಿ, ಕೊರೊನಾ ಮಾದರಿ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ಸುತ್ತೋಲೆ ಹೊರಡಿಸಿದ್ದಾರೆ.