ಬೆಂಗಳೂರು :ದಕ್ಷಿಣ ಕರ್ನಾಟಕ ನಮ್ಮ ಕಪಿಮುಷ್ಟಿಯಲ್ಲಿರುವ ಕ್ಷೇತ್ರ ಅಂತಾ ಕೆಲವರು ಹೇಳಿಕೊಂಡು ಓಡಾಡುತ್ತಾ ಇದ್ದಾರೆ. ಆದರೆ, ರಾಜಕಾರಣ ನಿಂತ ನೀರಲ್ಲ, ಜನ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಪರ ಒಲವು ಹೊಂದಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ಗೆ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ದಕ್ಷಿಣ ಕರ್ನಾಟಕ ಅಂದರೆ ನಮ್ಮ ಕೈಯಲ್ಲಿರುವ ಕ್ಷೇತ್ರ, ನಮ್ಮ ಕಪಿಮುಷ್ಟಿಯಲ್ಲಿರುವ ಕ್ಷೇತ್ರ ಅಂತಾ ಕೆಲವರು ಹೇಳಿಕೊಂಡು ಓಡಾಡುತ್ತಿದ್ದಾರೆ. ದಕ್ಷಿಣ ಕರ್ನಾಟಕದ ಜನ ಪ್ರಬುದ್ಧ ಜನ, ರಾಜರ ಕಾಲದಿಂದಲೂ ಈ ಪ್ರದೇಶ ಪ್ರಗತಿಯಲ್ಲಿತ್ತು.
ಹಲವಾರು ವರ್ಷಗಳ ಕಾಲ ಕೇವಲ 2 ಪಕ್ಷ ಬೆಂಬಲಿಸಿ ಇಂದು ಭ್ರಮನಿರಸನಗೊಂಡಿದ್ದಾರೆ. ಬದಲಾವಣೆಯನ್ನು ಆ ಭಾಗದ ಜನರು ಬಯಸುತ್ತಿದ್ದಾರೆ. ಪಕ್ಷ ಸೇರ್ಪಡೆಯಾದವರು ಜನರ ನಾಡಿ ಮಿಡಿತ ಗೊತ್ತಿರುವವರು. ಈ ಭಾಗದ ಸಮಸ್ಯೆ ಬಗೆಹರಿಸೋಕೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಜನರಿಗೆ ಈ ಬಗ್ಗೆ ವಿಶ್ವಾಸ ಬಂದಿದೆ ಎಂದರು.
ಭಾರತವನ್ನು ವಿಶ್ವಗುರು ಮಾಡುವ ಶಕ್ತಿ ಮೋದಿಯವರಿಗಿದೆ. ಎಲ್ಲರನ್ನೂ ಸಮಾನವಾಗಿ ನೋಡುವ ರಾಜಕಾರಣ ನಮ್ಮಲ್ಲಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್, ಈ 4 ಮಂತ್ರ ಇಟ್ಟುಕೊಂಡು ಹೋಗುತ್ತಿದ್ದಾರೆ. ಕೆಲವರು ಟೀಕೆ ಮಾಡ್ತಾರೆ,ಟೀಕೆ ಮಾಡೋದು ಸುಲಭ. 24 ಗಂಟೆ ಕೆಲಸ ಮಾಡ್ತಿರುವುದು ಮೋದಿಯವರು ಎಂದರು.
ಬಜೆಟ್ ಅನುಷ್ಠಾನ ಮಾಡಿದ್ದೇವೆ :ರಾಜ್ಯದ ಬಜೆಟ್ ಆದ ಬಳಿಕ ಜನ ಮತ್ತಷ್ಟು ವಿಶ್ವಾಸ ಇಟ್ಟಿದ್ದಾರೆ. ಎಲ್ಲರಿಗೂ ಆಶ್ಚರ್ಯಪಡುವ ಬಜೆಟ್ ನೀಡಿದ್ದು, ಎಲ್ಲರಿಗೂ ತಲುಪುವ ಕೆಲಸ ಮಾಡಿದ್ದೇವೆ. ಬಜೆಟ್ ಕೊಡೋದು ಅಷ್ಟೇ ಅಲ್ಲದೆ, ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಕೂಡ ಮಾಡ್ತಿದ್ದೇವೆ. ನಮ್ಮ ಸಾಧನೆ ಜನರ ಮುಂದಿಟ್ಟು ಮತ ಕೇಳುತ್ತೇವೆ. ಮತ್ತೆ ರಾಜ್ಯದಲ್ಲಿ 150+ ಸೀಟುಗಳು ಗೆಲ್ಲುವ ಮೂಲಕ, ವಿಧಾನಸೌಧದಲ್ಲಿ ಆಡಳಿತ ನೀಡುತ್ತೇವೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ :ಪ್ರತಿಪಕ್ಷ ನಾಯಕರು ಮತ್ತು ಸದಸ್ಯರು ಬಹಳ ಮಾತಾಡ್ತಿದ್ದಾರೆ. ಈಗಾಗಲೇ ಖಾತೆಗಳನ್ನೂ ಹಂಚಿಕೊಂಡಿದ್ದಾರೆ. ಖಂಡಿತ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಸಿಎಂ ಆಗುವುದಕ್ಕೂ ಪೈಪೋಟಿಯಲ್ಲಿದ್ದಾರೆ. ಅವರ ಯಾವ ಭಾಗ್ಯವೂ ಜನರಿಗೆ ತಲುಪಲಿಲ್ಲ. ಅವರು ಮತ್ತೆ ಬೇಡ ಅಂತಾ ಜನ ಅವರನ್ನು ಅಧಿಕಾರದಿಂದ ಕಿತ್ತೊಗೆದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಆಪರೇಷನ್ ಕಮಲದ ಸುಳಿವು: ಶ್ರಮಿಕರು, ಕಾರ್ಮಿಕರು ನಮ್ಮ ಶಕ್ತಿ. ಬದಲಾವಣೆಯ ಮೊದಲ ಹೆಜ್ಜೆ ದಕ್ಷಿಣ ಕರ್ನಾಟಕದಲ್ಲಿ ನಡೆದಿದೆ. ನಿರಂತರವಾಗಿ ಬದಲಾವಣೆ ತರ್ತಿದ್ದೇವೆ. ಅನೇಕರು ಪಕ್ಷ ಸೇರ್ಪಡೆಯಾಗಲು ಸಿದ್ಧರಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಬಳಿಕ, ನನ್ನ ಬಳಿ ವಿಪಕ್ಷದ ಶಾಸಕರು ಬಂದಿದ್ದರು. ಸಂಯಮ ಇರಲಿ, ಶಾಂತಿಯಾಗಿರಿ, ಬದಲಾವಣೆ ಬಂದಾಗ ಬರುವಂತೆ ಸೂಚಿಸಿದ್ದೇನೆ ಎಂದು ಮತ್ತಷ್ಟು ಆಪರೇಷನ್ ಕಮಲದ ಸುಳಿವು ನೀಡಿದರು.
ಕೇಂದ್ರದಲ್ಲಿ ಮತ್ತೆ ಬಿಜೆಪಿ :ಮದ್ದೂರಿನಲ್ಲಿ ಎಸ್.ಪಿ. ಸ್ವಾಮಿ ಮತ್ತು ಪಾಂಡವಪುರದಲ್ಲಿ ಇಂದ್ರೇಶ್ ಕೂಡ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅವರುಗಳು ಈಗಾಗಲೇ ಪಕ್ಷದ ಕೆಲಸ ಶುರು ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಪಕ್ಷಕ್ಕೆ ಸೇರಲಿದ್ದಾರೆ. ಬಿಜೆಪಿ ಅಂದ್ರೆ ಭಾರತ ಮಾತೆಯ ಭೂಮಿಯಲ್ಲಿ ಆಳವಾಗಿ ಬೇರೂರಿರುವ ಹೆಮ್ಮರ. ಬಿಜೆಪಿ ಪಾಟ್ನಲ್ಲಿರುವ ಗಿಡ ಅಲ್ಲ. ಬಿಜೆಪಿ ಬಗ್ಗೆ ಹಗುರವಾಗಿ ಮಾತಾಡೋರಿಗೆ ಈ ಮಾತು ಹೇಳಿದ್ದೇನೆ. ಈ ನೆಲದಲ್ಲಿ, ಜನರ ಮನಸಲ್ಲಿ ಬಿಜೆಪಿ ಆಳವಾಗಿ ಬೇರೂರಿದೆ. ಅಷ್ಟು ಸುಲಭವಾಗಿ ಪರಿಗಣಿಸಬೇಡಿ, 2023ರಲ್ಲಿ ರಾಜ್ಯದಲ್ಲಿ, 2024ರಲ್ಲಿ ಕೇಂದ್ರದಲ್ಲಿ ಬಿಜೆಪಿಗೇ ಮತ್ತೆ ಅಧಿಕಾರ ಎಂದರು.
ನಂತರ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಸಿದ್ಧಾಂತ, ಮೋದಿಯವರ ಆಡಳಿತ ಹಾಗೂ ರಾಜ್ಯದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಆಡಳಿತ ನೋಡಿ ಅನೇಕರು ಸೇರ್ಪಡೆಯಾಗಿದ್ದಾರೆ. ಮುಳುಗುವ ಹಡಗಿನಿಂದ ಹೊರಗೆ ಬಂದು, ಬೆಳಗುವ ಹಡಗಿನಲ್ಲಿ ಕೂತಿದ್ದೀರಿ. ನಿಮ್ಮನ್ನ ಪಾರ್ಟಿ ಗೌರವ ಪೂರ್ವಕವಾಗಿ ನಡೆಸಿಕೊಳ್ಳಲಿದೆ ಎಂದರು.
150+ ಸೀಟು ಗೆಲ್ಲುತ್ತೇವೆ :ಇಂದು ಬದಲಾವಣೆ ಪರ್ವ ಶುರುವಾಗಿದೆ. ಈಗ ಮೋದಿ ಯುಗ ಶುರುವಾಗಿದೆ. ಇಂದು ಕಾಂಗ್ರೆಸ್ ಮುಕ್ತ ಭಾರತ ಶುರುವಾಗಿದೆ. ಬೊಮ್ಮಾಯಿ ನೇತೃತ್ವದ 150+ ಸೀಟು ಪಡೆಯುತ್ತೇವೆ, ಮತ್ತೆ ಅಧಿಕಾರಕ್ಕೆ ಬರುತ್ತೇವೆ. ರಾಜ್ಯದಲ್ಲಿ ಎಲ್ಲರೂ ಬಿಜೆಪಿ ಸೇರಲು ಸಿದ್ಧರಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವು ಯಶಸ್ವಿಯಾಗಲಿದೆ. ಬಹಳಷ್ಟು ಜನ ಮುಂದಿನ ದಿನ ನಮ್ಮದು ಅಂತಾ ಕನಸು ಕಾಣುತ್ತಿದ್ದಾರೆ. ಬಂಡೆಯಲ್ಲಿ ಹುಲಿ ಕುಳಿತಿದೆ, ಹುಲಿ ಹೊರಗೆ ಹೋಗುತ್ತೆ, ಬಂಡೆ ಖಾಲಿಯಾಗಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಇಲ್ಲಿ ಹಾಲಿದೆ, ನೀವು ಸಕ್ಕರೆಯಾಗಿ ಬನ್ನಿ: ಅಧಿಕ ಹಗರಣ ನಡೆದಿದ್ರೆ ಅದು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಆಗಿದೆ. ಬಿಜೆಪಿ ತನಿಖೆಗೆ ನೀಡಿದೆ, ಪ್ರತಿಯೊಬ್ಬರನ್ನೂ ಜೈಲಿಗೆ ಅಟ್ಟುವ ಕೆಲಸ ಮಾಡಿದೆ. ನಿಮ್ಮ ಅಧಿಕಾರದಲ್ಲಿ ಹಾಸಿಗೆ, ದಿಂಬು ಹಗರಣ ನಡೆದಿದೆ. ಅಂದಿನ ಡಿವೈಎಸ್ಪಿ ಗಣಪತಿ, ಸಚಿವ ಕೆ.ಜೆ ಜಾರ್ಜ್ ವಿರುದ್ಧ ನೇರವಾಗಿ ಹೇಳಿಕೆ ನೀಡಿದ್ದರು. ಒಂದೇ ಒಂದು ಹಗರಣವನ್ನೂ ತನಿಖೆ ನೀವು ನಡೆಸಿಲ್ಲ.
ಬೊಮ್ಮಾಯಿ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಮುಂದಿನ ಹಾಗೂ ನಾಳೆಯ ದಿನ ನಮ್ಮದು. ಅನೇಕರು ಬಿಜೆಪಿ ವಿಚಾರದಾರೆ ಒಪ್ಪಿ ಬಂದಿದ್ದಾರೆ. ಎಲ್ಲಾ ಪಕ್ಷದಿಂದಲೂ ರಾಜ್ಯಕ್ಕೆ ಬಂದಿದ್ದಾರೆ. ಬಂದವರು, ಇದ್ದವರು ಅಂತ ಯಾರನ್ನೂ ಭಾವಿಸಿಲ್ಲ. ಇಲ್ಲಿರೋ ಗೋಪಾಲಯ್ಯ, ಸೋಮಶೇಖರ್, ಸುಧಾಕರ್ ಅವರನ್ನ ಕೇಳಿ. ಇಲ್ಲಿ ಹಾಲಿದೆ, ನೀವು ಸಕ್ಕರೆಯಾಗಿ ಬನ್ನಿ, ಪಕ್ಷವನ್ನ ಕಟ್ಟೋಣ, ಅಧಿಕಾರಕ್ಕೆ ತರೋಣ ಎಂದು ಬಿಜೆಪಿ ಸೇರಿದವರಿಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕರೆ ನೀಡಿದರು.
ಇದನ್ನೂ ಓದಿ:ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಮಾಜಿ ಶಾಸಕ: ಬಿಜೆಪಿಗೆ ಸೇರ್ಪಡೆ