ಕರ್ನಾಟಕ

karnataka

ETV Bharat / state

ಮಾಸ್ಕ್ ಧರಿಸದಿದ್ರೆ ನಗರ ಪ್ರದೇಶದಲ್ಲಿ ಸಾವಿರ, ಗ್ರಾಮಾಂತರ ಪ್ರದೇಶದಲ್ಲಿ 500 ರೂ. ದಂಡ - People will must use mask

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಮಾಸ್ಕ್ ರಾಬಾಣವಾಗಿದೆ. ಇದನ್ನು ಜನರು ಕಡ್ಡಾಯವಾಗಿ ಧರಿಸಬೇಕು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಅವರು ಮನವಿ ಮಾಡಿದ್ದಾರೆ.

Ashwath Narayan
Ashwath Narayan

By

Published : Oct 1, 2020, 4:03 PM IST

ಬೆಂಗಳೂರು: ಕೋವಿಡ್‌ ತಡೆಗಟ್ಟಲು ಮಾಸ್ಕ್ ರಾಮಬಾಣ, ಮಾರಕ ವೈರಸ್ ಗೆ ಮಾಸ್ಕ್ ಅತ್ಯುತ್ತಮ ಅಸ್ತ್ರವಾಗಿದೆ. ವೈಜ್ಞಾನಿಕವಾಗಿಯೂ ಈ ಅಂಶ ಸಾಬೀತಾಗಿದ್ದು, ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಂಡು ಮಾಸ್ಕ್ ತಪ್ಪದೇ ಹಾಗೂ ಶುಚಿ ಮಾಡಿಕೊಂಡು ಬಳಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥ ನಾರಾಯಣ ಅವರು ಮನವಿ ಮಾಡಿದ್ದಾರೆ.

ಕೋವಿಡ್‌ ಸೋಂಕಿಗೆ ತುತ್ತಾಗಿ ಹಲವು ದಿನ ಮನೆಯಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಪಡೆದಿದ್ದ ಅವರು ಇಂದು ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಗೆ ಹಾಜರಾಗಿದ್ದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.

ಕೊರೊನಾ ಸೋಂಕು ಮತ್ತಷ್ಟು ಹರಡಲು ಬಿಡಬಾರದು. ಇದರಲ್ಲಿ ಪ್ರತಿಯೊಬ್ಬರ ಕರ್ತವ್ಯವೂ ಇದೆ. ಮಾಸ್ಕ್ ತೆಗೆದು ಮಾತನಾಡುವಂಥ ಕೆಲಸವನ್ನು ಯಾರು ಮಾಡಬಾರದು. ದಂಡ ವಿಧಿಸಲು ಸರ್ಕಾರಕ್ಕೆ ಇಷ್ಟವಿಲ್ಲ. ಆದರೆ ಜನರು ಈ ಬಗ್ಗೆ ಮೂಡಿಸಲಾಗಿರುವ ಜಾಗೃತಿಯ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು..

ದಂಡ ವಿಧಿಸಲು ಸರ್ಕಾರ ನಿರ್ಧಾರ :

ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 1000 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.

ದಂಡದ ಪ್ರಮಾಣ ಹೆಚ್ಚಾಗಿದೆ ಎಂದು ಜನರು ದೂರುತ್ತಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಇಲ್ಲಿ ದಂಡ ಜಾಸ್ತಿ, ಕಡಿಮೆ ಎನ್ನುವುದಕ್ಕಿಂತ ಜನರ ಆರೋಗ್ಯವೇ ಮುಖ್ಯ. ಕೋವಿಡ್ ಪೀಡೆ ಕೆಲದಿನ ಇದ್ದು ಹೋಗಿಬಿಡುತ್ತೆ ಎನ್ನುವ ನಂಬಿಕೆ ಇತ್ತು. ಅದು ಬಹಳ ಕಾಲ ಮುಂದುವರಿದಿದೆ. ಹೀಗಾಗಿ ಜನರ ಆರೋಗ್ಯವನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಹಾಗೂ ಜನರು ಮಾಸ್ಕ್‌ ಅನ್ನು ತಪ್ಪದೇ ಧರಿಸಬೇಕು ಎಂದು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ಜನರು ವೈರಸ್ ಜೊತೆಯೇ ಜೀವನ ನಡೆಸಬೇಕು. ಹೀಗಾಗಿ ಹೊರಗೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯ, ಜೊತೆಗೆ ವೈರಸ್ ಇನ್ನು ವ್ಯಾಪಕವಾಗಿ ಹರಡುತ್ತದೆ. ಆದರೂ ಜನರು ಮಾಸ್ಕ್ ಧರಿಸದೇ ಮುಕ್ತವಾಗಿ ಓಡಾಟ ನಡೆಸುತ್ತಿರುವುದು ಸರಿಯಲ್ಲ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಇತರರ ಆರೋಗ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದಂಡವನ್ನು ವಿಧಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ನೆನಪಿರಲಿ! ನಾನು ಸೋಂಕಿತನಾಗಿದ್ದೆ:

ಕೋವಿಡ್ ಹಗುರವಾಗಿ ತೆಗೆದುಕೊಳ್ಳುವ ಕಾಯಿಲೆ ಅಲ್ಲ. ಅದು ಖಂಡಿತಾ ಮಾರಕ ವೈರಸ್. ಸ್ವತಃ ನಾನೇ ಸೋಂಕಿತನಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಹೊರಗೆ ಬಂದಿದ್ದೇನೆ. ಸೋಂಕು ತಗುಲುವ ಮುನ್ನ, ಗುಣಮುಖನಾದ ನಂತರ ಹೇಗೆ ಆರೋಗ್ಯ ಇರುತ್ತದೆ ಎಂಬ ಅನುಭವ ಸ್ವತಃ ನನಗೇ ಆಗಿದೆ. ಕ್ವಾರಂಟೈನ್ ಆಗಿ ನಾನು ಎದುರಿಸಿದ ಕಷ್ಟದ ಪರಿಸ್ಥಿತಿಯನ್ನು ಬೇರಾರೂ ಎದುರಿಸುವುದು ಬೇಡ. ಎಲ್ಲರೂ ಸುರಕ್ಷಿತವಾಗಿರಬೇಕು ಎಂಬುದು ನನ್ನ ಕಾಳಜಿ ಎಂದು ಡಿಸಿಎಂ ತಿಳಿಸಿದರು.

ABOUT THE AUTHOR

...view details