ನೆಲಮಂಗಲ: ಉತ್ತರ ಕರ್ನಾಟಕದ ಸಂತ್ರಸ್ತರ ನೆರವಿಗೆ ಬಡವ ಶ್ರೀಮಂತರೆನ್ನುವ ಭೇದ ಭಾವ ಇಲ್ಲದೆ ಎಲ್ಲಾ ವರ್ಗದ ಜನರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗೆ ಮುಂದಾದ ಜನತೆ ನೆಲಮಂಗಲ ಪಟ್ಟಣದ ಕೃಷ್ಣಾನಗರದ ಕೂಲಿ ಕಾರ್ಮಿಕ ಚೌಡಪ್ಪ ನೆರೆ ಸಂತ್ರಸ್ತರ ನೆರವಿಗೆ ಮುಂದಾದರು. ಮಹಿಳೆಯರಿಗೆ ಒಳ ಉಡುಪು, ನ್ಯಾಪ್ಕಿನ್, ಮಕ್ಕಳಿಗೆ ಪ್ಯಾಂಪರ್, ನೀರಿನ ಬಾಟಲ್, ಚಾಪೆ, ಹೊದಿಕೆ, ಬನ್, ಬಿಸ್ಕತ್, ಬ್ರೆಡ್, ಸೊಳ್ಳೆಬತ್ತಿ ಜೊತೆಗೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ ಕಳುಹಿಸಿದರು. ಉತ್ತರ ಕರ್ನಾಟಕದ ಕಷ್ಟಕ್ಕೆ ನೆರವಾಗುವ ಮೂಲಕ ಮಾನವೀಯತೆ ಮರೆದಿದ್ದಾರೆ ನೆಲಮಂಗಲ ನಿವಾಸಿಗಳು.
ಹುಬ್ಬಳ್ಳಿ: ವಿ ಟ್ರಾನ್ಸ್ ಇಂಡಿಯಾ ಲಿಮಿಟೆಡ್ ಹಾಗೂ ಸ್ಮೈಲ್ ವತಿಯಿಂದ ಪ್ರವಾಹಪೀಡಿತ ಪ್ರದೇಶದಲ್ಲಿರುವ ಜನರಿಗೆ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ನೀಡಲಾಗುತ್ತಿದೆ.
ಉತ್ತರ ಕರ್ನಾಟಕದಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಬಹುತೇಕ ಜಿಲ್ಲೆಗಳು ಜಲಾವೃತಗೊಂಡಿವೆ. ಆಶ್ಲೇಷ ಮಳೆಯ ಆರ್ಭಟದಿಂದಾಗಿ ಎಲ್ಲೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಲ್ಲಿ ಕೊಚ್ಚಿ ಹೋದ ಬದುಕು, ಬೆಳೆದ ಬೆಳೆ ನೀರುಪಾಲಾಗಿ ಜನಜೀವನವನ್ನು ಅಕ್ಷರಶಃ ನರಕವನ್ನುಂಟು ಮಾಡಿದೆ.
ಕುಡಿಯುವ ನೀರಿಗಾಗಿ, ತುತ್ತು ಅನ್ನಕ್ಕಾಗಿ, ಉಡಲು ಬೆಚ್ಚಗಿನ ಬಟ್ಟೆಗಾಗಿ, ಕಾಯಿಲೆ ಇರುವವರಿಗೆ ಔಷಧಿಗಾಗಿ ಅದೆಷ್ಟೋ ಲಕ್ಷಾಂತರ ಜನ ದಿನನಿತ್ಯ ಪರಿತಪಿಸುವಂತಾಗಿದೆ. ವಿ ಟ್ರಾನ್ಸ್ ಹಾಗೂ ಟೀಮ್ ಸ್ಮೈಲ್ ಯುವಕರ ತಂಡಗಳು ಸೇರಿ ನೆರೆ ಸಂತ್ರಸ್ತರಿಗೆ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸಿ ನವಲಗುಂದ, ನರಗುಂದ, ಕೊಣ್ಣುರ, ಹೆಬಸೂರ, ಕೀರಿಸೂರ ಗ್ರಾಮಗಳಿಗೆ ತೆರಳಿ ನಿರಾಶ್ರಿತ ಜನರಿಗೆ ಒದಗಿಸುವ ಕೆಲಸ ಮಾಡಿದ್ದಾರೆ.