ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ವಿವಿಧ ಖಾದ್ಯಗಳನ್ನು ಸವಿದರು. ಕೃಷಿ ಸಚಿವ ಚೆಲುವರಾಯ ಸ್ವಾಮಿ ಹಾಗೂ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಶನಿವಾರ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ಪ್ರದರ್ಶನಕ್ಕಿಟ್ಟ ವಿವಿಧ ಉತ್ಪನ್ನಗಳು, ಮಾರಾಟದ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಿರಿಧಾನ್ಯ ಆರೋಗ್ಯಕರ ಜೀವನಕ್ಕೆ ಅತ್ಯುಪಯುಕ್ತವಾಗಿರುವ ಕುರಿತು ಜಾಗೃತಿ ಮೂಡಿಸುವ ಹಾಗೂ ಸಿರಿಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕೃಷಿ ಇಲಾಖೆಯು ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳವನ್ನು ಈ ಬಾರಿ ಅದ್ಧೂರಿಯಾಗಿ ಆಯೋಜಿಸಿದೆ.
ಬೆಂಗಳೂರು ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜನರು ಸಿರಿಧಾನ್ಯಗಳ ಮಾಹಿತಿ ಪಡೆದರು. ಪ್ರತಿ ಮಳಿಗೆಯೆದುರು ನಿಂತು ಖಾದ್ಯಗಳ ರುಚಿ ಸವಿದರು. ಸಿರಿಧಾನ್ಯಗಳಾದ ನವಣೆ, ಸಜ್ಜೆ, ಆರ್ಕ, ಬರಗು, ರಾಗಿಯಿಂದ ತಯಾರಿಸಿದ ವೈವಿಧ್ಯಮಯ ತಿಂಡಿ ತಿನಿಸುಗಳು, ನವಣೆ ಮಸಾಲೆ ಬ್ರೆಡ್, ರಾಗಿ ಬ್ರೆಡ್, ಫಿಜ್ಜಾ, ಬರ್ಗರ್, ನೂಡಲ್ಸ್, ವಿವಿಧ ರೀತಿಯ ಬಿಸ್ಕತ್ತು, ಚಕ್ಕುಲಿ, ಚಿಕ್ಕಿ. ಅಲ್ಲದೇ ವಿಶೇಷವಾಗಿ ಯುವ ಪೀಳಿಗೆ ಇಷ್ಟ ಪಡುವ ಆಧುನಿಕ ಸಿರಿಧಾನ್ಯ ಬ್ರೌನಿ, ಬಫ್ತಿನ್ಸ್, ರಾಗಿ ಚಾಕಲೆಟ್, ಜಾಮೂನು ಗ್ರಾಹಕರನ್ನು ಮನಸೂರೆಗೊಳಿಸಿದವು.