ಬೆಂಗಳೂರು:ರಾಜ್ಯದ ಹಲವೆಡೆ ಜನರು ವಿದ್ಯುತ್ ಬಿಲ್ ಪಾವತಿ ನಿರಾಕರಿಸುತ್ತಿರುವುದು ಸರಿಯಾಗಿಯೇ ಇದೆ. ನಮ್ಮ ಸರ್ಕಾರ ಬಂದ ನಂತರ ಯಾರೂ ಬಿಲ್ ಕಟ್ಟುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ನಾಯಕರು ಹೇಳಿದ್ದರು. ಅದರಂತೆ ಜನ ಈಗ ವಿದ್ಯುತ್ ಬಿಲ್ ಕಟ್ಟಬಾರದು ಎಂದು ನಾನೂ ಮನವಿ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಗ್ಯಾರಂಟಿಗಳಿಂದ ಕೆಲವು ಕಡೆ ಕರೆಂಟ್ ಬಿಲ್ ಕಟ್ಟಲು ನಿರಾಕರಿಸಲಾಗುತ್ತಿದೆ. ಜನರ ಈ ನಿರ್ಧಾರ ಸಹಜವೇ ಆಗಿದೆ, ನಮ್ಮ ಸರ್ಕಾರ ಬಂದಮೇಲೆ 200 ಯೂನಿಟ್ ವರೆಗೂ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಅವರೇ ಹೇಳಿದ್ದಾರೆ. ನನಗೂ ಸೇರಿ ಉಚಿತ ಕರೆಂಟ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅಲ್ವಾ?. ಹೀಗಿರುವಾಗ ಜನರು ಯಾಕೆ ಕರೆಂಟ್ ಬಿಲ್ ಕಟ್ಟಬೇಕು? ಎಂದು ಪ್ರಶ್ನಿಸಬೇಕು. ಹೀಗಿರುವಾಗ ಜನರು ಯಾಕೆ ಕರೆಂಟ್ ಬಿಲ್ ಕಟ್ಟಬೇಕು?. ನಾನು ಕೂಡ ಜನರಿಗೆ ಮನವಿ ಮಾಡುತ್ತೇನೆ, ರಾಜ್ಯದ ಜನರು ಕರೆಂಟ್ ಬಿಲ್ ಕಟ್ಟಬೇಡಿ, ಅವರೇ ಹೇಳಿರುವಂತೆ ಭಾಗ್ಯಗಳ ಲೆಕ್ಕದಲ್ಲಿ ಯಾರೂ ಕರೆಂಟ್ ಬಿಲ್ ಕಟ್ಟುವ ಅಗತ್ಯವಿಲ್ಲ, ಕಾಂಗ್ರೆಸ್ನವರೇ ಜನರ ಕರೆಂಟ್ ಬಿಲ್ ಕಟ್ಟುತ್ತಾರೆ ಎಂದರು.
ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕಾಗಿ ಕಿತ್ತಾಟ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಕಟೀಲ್, ರಾಜ್ಯದ ಜನರು ಕಾಂಗ್ರೆಸ್ಗೆ ಬಹುಮತ ಕೊಟ್ಟಿದ್ದಾರೆ, ಆಡಳಿತ ನಡೆಸಲಿ ಎಂದು ಮ್ಯಾಂಡೇಟ್ ಕೊಟ್ಟಿದ್ದಾರೆ ಆದರೆ ಕಾಂಗ್ರೆಸ್ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಮಾಡದೇ ತಡ ಮಾಡುತ್ತಿದೆ ರಾಜ್ಯದಲ್ಲಿ ಅಲ್ಲಲ್ಲಿ ಗಲಾಟೆಗಳು ಆಗುತ್ತಿವೆ. ನೆರೆ ಬರುವ ಸಂದರ್ಭ, ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದವರು ಗ್ಯಾರಂಟಿ ಕಾರ್ಡ್ಗಳ ಬಗ್ಗೆ ನಿರ್ಧಾರ ಮಾಡಬೇಕಾದವರು, ಇನ್ನೂ ಕುರ್ಚಿಗಾಗಿ ಗಲಾಟೆ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಗಲಾಟೆ ಪಕ್ಷವಾಗಿ ಮುಂದುವರಿದಿದೆ ಎಂದು ಟೀಕಿಸಿದರು.