ಬೆಂಗಳೂರು : ನಗರದ ಜಿಕೆವಿಕೆ (GKVK) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ (krishi mela)ಕ್ಕೆ ಆಗಾಗ ಮಳೆ ಸುರಿದು ಅಡ್ಡಿ ಮಾಡುತ್ತಿದೆ. ನಿನ್ನೆಯಂತೆ ಇಂದು ಸಹ ಮಳಿಗೆಗಳಿದ್ದ ಪ್ರದೇಶ ಕೆಸರುಗದ್ದೆಯಾಗಿಯೇ ಉಳಿದಿತ್ತು. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಜನ ಭಾರಿ ಸಂಖ್ಯೆಯಲ್ಲಿ ಆಗಮಿಸಿ ಕೃಷಿಮೇಳವನ್ನು ಯಶಸ್ವಿಗೊಳಿಸುತ್ತಿದ್ದಾರೆ.
ನಿನ್ನೆಯ ರೀತಿಯಲ್ಲೇ ಇಂದು ಸಹ ಮಳೆ ಸುರಿಯುತ್ತದೆ ಎಂದು ಭಾವಿಸಿದ್ದ ಜನ ಮಧ್ಯಾಹ್ನ 12 ಗಂಟೆಯವರೆಗೂ ಅಷ್ಟು ದೊಡ್ಡ ಪ್ರಮಾಣದಲ್ಲಿ ಮೇಳದತ್ತ ಆಗಮಿಸಲಿಲ್ಲ. ಇದಾದ ಬಳಿಕ ನಿಧಾನವಾಗಿ ಬಸ್ಗಳು ಹಾಗೂ ಖಾಸಗಿ ವಾಹನಗಳಲ್ಲಿ ಗುಂಪು ಗುಂಪಾಗಿ ಜನ ಬಂದರು.
ನಿನ್ನೆಯಂತೆ ಇಂದು ಸಹ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು. ಗೃಹಬಳಕೆ ವಸ್ತುಗಳ ಮಳಿಗೆಗಳತ್ತ ಹೆಚ್ಚಿನ ಜನರು ಆಕರ್ಷಿತರಾಗಿದ್ದರು.
ವೇದಿಕೆ ಕಾರ್ಯಕ್ರಮಕ್ಕೆ ಜನರ ಕೊರತೆ
ಕೃಷಿಮೇಳಕ್ಕೆ ಆಗಮಿಸಿದ ಜನ ಮಳಿಗೆಗಳಲ್ಲಿ ಹೆಚ್ಚಿನ ಓಡಾಟ ಮಾಡಿದರೆ ಹೊರತು, ಪ್ರಶಸ್ತಿ ಪ್ರದಾನ ಸೇರಿದಂತೆ ಯಾವುದೇ ರೀತಿಯ ಸಭಾ ಕಾರ್ಯಕ್ರಮದಲ್ಲಿ ಅಷ್ಟಾಗಿ ಗೋಚರಿಸಲಿಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಭಾ ಕಾರ್ಯಕ್ರಮವನ್ನು ವೀಕ್ಷಿಸಿದ್ದು ಕಂಡು ಬಂತು. ಬೆಳಗಿನ ಅವಧಿಯ ವೇದಿಕೆ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳೇ ಹೆಚ್ಚಾಗಿ ಗೋಚರಿಸಿದವು.