ಆನೇಕಲ್(ಬೆಂಗಳೂರು):ಹೈಕೋರ್ಟ್ ಆದೇಶದಂತೆ ಅತ್ತಿಬೆಲೆಯಲ್ಲಿ 21 ಪಟಾಕಿ ಮಳಿಗೆಗಳಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಭಾನುವಾರ ಬೆಳಗ್ಗೆಯಿಂದಲೇ ಜನರು ಪಟಾಕಿ ಖರೀದಿಸಲು ಮುಗಿಬಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು-ಹೊಸೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಬೇಕಾಯಿತು. ಇದರಿಂದ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಕುರಿತು ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, "ಪೊಲೀಸ್ ಅಧಿಕಾರಿಗಳು ಪಟಾಕಿ ಮಳಿಗೆಗಳ ಕೀ ಯನ್ನು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಬೇಕೆಂಬ ಉಚ್ಚ ನ್ಯಾಯಾಲಯದ ಆದೇಶದಂತೆ ನಾವು ಕೀ ಯನ್ನು ಹಸ್ತಾಂತರ ಮಾಡಿದ್ದೇವೆ. ಸುರಕ್ಷಿತ ಕ್ರಮಗಳನ್ನು ಮತ್ತು ನಿಯಮಾವಳಿಯಂತೆ ಪಟಾಕಿ ಮಾರಾಟ ಮಾಡಬೇಕೆಂದು ನಿರ್ದೇಶನ ಕೊಟ್ಟಿದೆ. ಜೊತೆಗೆ ತಹಶೀಲ್ದಾರ್ ಅವರು ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೇಳಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳು ಟಾಸ್ಕ್ ಫೋರ್ಸ್ ಅನ್ನು ನಿಯೋಜನೆ ಮಾಡಿದ್ದರು. ಟಾಸ್ಕ್ ಫೋರ್ಸ್ನಲ್ಲಿರುವ ಸದಸ್ಯರು ಎಲ್ಲಾ ಪಟಾಕಿ ಅಂಗಡಿಗಳಿಗೆ ಭೇಟಿ ನೀಡಿ ವರದಿಯನ್ನು ತಯಾರಿಸುತ್ತಿದ್ದಾರೆ. ಆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ" ಎಂದರು.
"ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇವೆ. ಇಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ಹೊಸೂರಿನಲ್ಲಿ ಪಟಾಕಿ ಮಳಿಗೆಗಳಿರುವುದರಿಂದ ಜನರು ಪಟಾಕಿ ಖರೀದಿಸಲು ಹೆಚ್ಚು ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಎರಡ್ಮೂರು ದಿನಗಳಿಂದ ಟ್ರಾಫಿಕ್ ಜಾಮ್ ಆಗಿತ್ತು. ಹಾಗಾಗಿ ಅಲ್ಲಿಗೆ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ, ನಾನು ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ. ಈಗ ಹೆಚ್ಚು ಟ್ರಾಫಿಕ್ ಜಾಮ್ ಇಲ್ಲ" ಎಂದು ಹೇಳಿದರು.