ಬೆಂಗಳೂರು: ಬಡವರಿಗಾಗಿ ಸರ್ಕಾರ ಪಡಿತರ ವಿತರಿಸಿದರೂ ಅದನ್ನು ನ್ಯಾಯಬೆಲೆ ಅಂಗಡಿಗಳು ಸಮರ್ಪಕವಾಗಿ ವಿತರಿಸದೇ ಇರುವುದರಿಂದ ಬಡ ಕುಟುಂಬಗಳು ಹಸಿವಿನಿಂದ ಬಳಲುವಂತಾಗಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ಮಂಡೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹುಸ್ಕೂರು ಕೋಡಿ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಬಡವರಿಗೆ ವಿತರಿಸುವ ಪಡಿತರವನ್ನು ಕಳೆದ ಎರಡು ಮೂರು ತಿಂಗಳಿನಿಂದ ವಿತರಿಸದೇ ವಂಚಿಸುತ್ತಿದ್ದ ಬಗ್ಗೆ ಸ್ಥಳೀಯರು ದೂರು ನೀಡಿದ್ದರು.
ಪಡಿತರ ವಿತರಿಸದ ನ್ಯಾಯಬೆಲೆ ಅಂಗಡಿ ಇನ್ನು ಬಡ ಜನರಿಗೆ ನೀಡುವ ಅಕ್ಕಿ, ಬೇಳೆಯನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಆಗಸ್ಟ್ ತಿಂಗಳಲ್ಲಿ ಪ್ರತಿ ಕಾರ್ಡ್ ನಲ್ಲಿ 4 ರಿಂದ 6 ಕೆಜಿ ಅಕ್ಕಿ ಕಡಿತ ಮಾಡಿದ್ದು, ಅದನ್ನು ನೆರೆ ಸಂತ್ರಸ್ತರಿಗೆ ವಿತರಿಸದೇ ಮೋಸ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿದ ಮಂಡೂರು ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಕೆ. ಕೆಂಪರಾಜು, ನ್ಯಾಯಬೆಲೆ ಅಂಗಡಿಯವರನ್ನು ತರಾಟೆಗೆ ತೆಗೆದುಕೊಂಡು ಪಡಿತರ ವಿತರಿಸುವಂತೆ ಸೂಚಿಸಿದ್ದಾರೆ.