ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಅಸ್ತ್ರ ಬಳಸುತ್ತಿದೆ. ಇದಕ್ಕೂ ಮುನ್ನ ಬೆಂಗಳೂರು ತೊರೆಯಲು ವಲಸಿಗರು ಸಜ್ಜಾಗಿದ್ದಾರೆ. ಇದಕ್ಕಾಗಿಯೇ ಇಂದು ಮತ್ತು ನಾಳೆ 800 ಕೆ ಎಸ್ ಆರ್ ಟಿಸಿ ಬಸ್ಸುಗಳನ್ನು ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.
ಈಗಾಗಲೇ ಇಂದು ಬೆಳಗ್ಗೆ 11 ಗಂಟೆಯವರೆಗೆ 333 ಬಸ್ಸುಗಳು ಬೆಂಗಳೂರಿನಿಂದ ಕಾರ್ಯಚರಣೆಗೊಳಿಸಿದ್ದು, 8,938 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇಂದು 231 ಬಸ್ಸುಗಳು ಮುಂಗಡ ಬುಕ್ಕಿಂಗ್ ಕೂಡ ಆಗಿವೆ. ಇತ್ತ ಸಾಮಾಜಿಕ ಅಂತರ ಕಾಪಾಡಿ, ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಸಾರ್ವಜನಿಕರು ವೃಥಾ ಆತಂಕಕ್ಕೆ ಒಳಗಾಗಬೇಡಿ. ಅತೀ ಹೆಚ್ಚು ಬಸ್ಸುಗಳನ್ನು ಕಾರ್ಯಾಚರಣೆಗೆ ನಿಯೋಜಿಸಲು ಈಗಾಗಲೇ ಯೋಜಿಸಲಾಗಿದೆ ಎಂದು ನಿಗಮವು ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಾಲ್ ಸೆಂಟರ್ ನಂ. 9449596666 ಹಾಗೂ ಮುಂಗಡ ಟಿಕೆಟ್ ಬುಕ್ಕಿಂಗ್ ಗೆ www.ksrtc.in ಅನ್ನು ಸಂಪರ್ಕಿಸುವಂತೆ ಮನವಿ ಮಾಡಿದೆ.
ಬೆಂಗಳೂರಿನಿಂದ ಊರಿನ ಕಡೆಗೆ ಹೆಜ್ಜೆ ಹಾಕುತ್ತಿರುವ ಜನ ಉತ್ತರ ಕರ್ನಾಟಕ ಬಸ್ಗಳಲ್ಲಿ ಹೆಚ್ಚು ಜನ:
ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ತಮ್ಮ ತಮ್ಮ ಊರಿನತ್ತ ಪ್ರಯಾಣಿಸಲು ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ. ಇಷ್ಟು ದಿನ ಖಾಲಿ ಖಾಲಿ ಹೊಡೆಯುತ್ತಿದ್ದ ಬಸ್ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಅತೀ ಹೆಚ್ಚು ಉತ್ತರ ಕರ್ನಾಟಕ ಭಾಗಕ್ಕೆ ತೆರಳುತ್ತಿದ್ದು, ಜನರನ್ನ ನಿಯಂತ್ರಿಸಲು ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.