ಬೆಂಗಳೂರು:ಆಪರೇಷನ್ನಂತಹ ಯಾವುದೇ ಗೋಜಿಗೆ ನಾವು ಹೋಗುವುದಿಲ್ಲ, ನಮಗೆ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಜನ ಹೇಳಿದ್ದಾರೆ. ಹಾಗಾಗಿ ನಾವು ವಿಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ಜನರ ಸಂಕಷ್ಟಕ್ಕೆ ನೆರವಾಗಲೂ ಗಮನ ಹರಿಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಗಾಪುರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ಸರ್ಕಾರದ ಆಪರೇಷನ್ ಮಾಡುವ ಕುರಿತಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದರು. ಬಿಜೆಪಿ ಯಾವುದೇ ಗೋಜಿಗೆ ಹೋಗುವುದಿಲ್ಲ. ರಾಜ್ಯದಲ್ಲಿ ಮಳೆ ಬರುತ್ತಿದೆ, ರೈತರು ಕಷ್ಟದಲ್ಲಿದ್ದಾರೆ, ಇದರ ಬಗ್ಗೆ ನಾವು ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇವೆ. ಇನ್ನು ಅನೇಕ ವಿಷಯಗಳಿವೆ. ಆ ಕಡೆ ನಾವು ಗಮನ ಹರಿಸುತ್ತಿದ್ದೇವೆ. ಸಭೆ ನಡೆಸಿ ಚರ್ಚೆ ಮಾಡುತ್ತಿದ್ದೇವೆ. ಜನರ ಸಂಕಷ್ಟದ ಸಮಯದಲ್ಲಿ ಯಾವ ರೀತಿಯಲ್ಲಿ ಮುಂದುವರೆಯಬೇಕು ಎಂದು ಯೋಚನೆ ಮಾಡುತಿದ್ದೇವೆ ಎಂದು ತಿಳಿಸಿದರು.
ಸರ್ಕಾರವನ್ನು ಹುಮ್ಮಸ್ಸಿನಲ್ಲಿ ರಚನೆ ಮಾಡಿದ್ದರು. ಆದರೆ ಆ ಹುಮ್ಮಸ್ಸು ಈಗ ಕಾಣುತ್ತಿಲ್ಲ. 30ಕ್ಕೂ ಹೆಚ್ಚು ಜನ ಶಾಸಕರು ಪತ್ರ ಬರೆದ ಬಗ್ಗೆ ಮಾಹಿತಿ ಇದೆ. ನಮಗೆ ಅನುದಾನ ಸಿಗುತ್ತಿಲ್ಲ. ನಾವು ಹೇಳಿದ ರೀತಿ ವರ್ಗಾವಣೆ ಮಾಡುತ್ತಿಲ್ಲ. ಸಚಿವರು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ. ಒಂದೊಂದು ವರ್ಗಾವಣೆಗೆ ನಾಲ್ಕೈದು ಜನ ಮಂತ್ರಿಗಳು ಪತ್ರ ಕೊಟ್ಟರೂ ವರ್ಗಾವಣೆ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಶಾಸಕರಿಗೆ ಇಷ್ಟು ಬೇಜಾರಾಗಿದ್ದರೆ, ಜನರಿಗೆ ಎಷ್ಟು ಬೇಜಾರಾಗಿರಬೇಡ. ಇದನ್ನು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಸರ್ಕಾರ ಇದೆಯಾ? 30 ಜನ ಶಾಸಕರು ಪತ್ರಕ್ಕೆ ಸಹಿ ಹಾಕಿದ್ದಾರೆ, ನಮ್ಮ ಕೆಲಸಗಳನ್ನು ಮಂತ್ರಿಗಳು ಮಾಡಿಕೊಡುತ್ತಿಲ್ಲ. ಮಂತ್ರಿಗಳು ಭೇಟಿಗೂ ಅವಕಾಶ ಕೊಡುತ್ತಿಲ್ಲ. ಅಹಂಕಾರದಿಂದ ವರ್ತನೆ ಮಾಡುತ್ತಿದ್ದಾರೆ. ನಮ್ಮ ಯಾವುದೇ ಚಟುವಟಿಕೆಗಳು ಕಾರ್ಯಗಳು ಆಗುತ್ತಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ರವಿಕುಮಾರ್ ಆರೋಪಿಸಿದರು.