ಬೆಂಗಳೂರು/ಬೆಳಗಾವಿ/ವಿಜಯಪುರ:ದೇಶದೆಲ್ಲೆಡೆ ಮಹಾಮಾರಿ ಸೋಂಕು ಹೊಸ ಸ್ವರೂಪದಲ್ಲಿ ಅತ್ಯಂತ ವೇಗವಾಗಿ ಹಬ್ಬಿ ಜನರ ನಿದ್ದೆಗೆಡಿಸಿದೆ. ಲಾಕ್ಡೌನ್ನಿಂದ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿದ್ದರೂ ಸಮಸ್ಯೆ ಸಂಪೂರ್ಣ ಸರಿಯಾಗೋ ತನಕ ಜನ್ರಿಗೆ ಕೊರೊನಾ ಕಾಟ ತಪ್ಪಿದ್ದಲ್ಲ. ಕೋವಿಡ್ ಎರಡನೇ ಅಲೆ ಆರ್ಭಟಕ್ಕೆ ಬೆಚ್ಚಿಬಿದ್ದಿರುವ ಜನ ಲಸಿಕೆ ಮೊರೆ ಹೋಗುತ್ತಿದ್ದು, ಇದರಲ್ಲೂ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಲಸಿಕೆಯ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ನ ಮೆಸೇಜ್ ಬರದೇ ಪರದಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ 3 ಸಾವಿರಕ್ಕೂ ಅಧಿಕ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು, ಲಸಿಕೆಯ ಕೊರತೆಯೇ ಲಸಿಕಾಭಿಯಾನಕ್ಕೆ ಅಡ್ಡಿಯಾಗಿದೆ. ದತ್ತಾಂಶ ಅಪ್ಲೋಡ್ ಮಾಡುವುದರಲ್ಲಿಯೂ ಕೆಲ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಆದರೂ ಆರೋಗ್ಯ ಇಲಾಖೆ ಕಾರ್ಯಕರ್ತರು ತಾಳ್ಮೆಯಿಂದ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿಯಲ್ಲಿ ಲಸಿಕಾಕರಣದ ಆರಂಭದಲ್ಲಿ ಮಾಹಿತಿ ಅಪ್ಲೋಡ್ ಮಾಡುವಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಮೊದಲ ಡೋಸ್ ಪಡೆದವರು ಎರಡನೇ ಡೋಸ್ಗೆ ಮೆಸೇಜ್ ಬರದೇ ಪರದಾಡಿದ್ದರು. ಜನಾಕ್ರೋಶಕ್ಕೆ ಮಣಿದ ಜಿಲ್ಲಾಡಳಿತ, ಮೊದಲ ಡೋಸ್ ಪಡೆದವರಿಗೆ ಮೆಸೇಜ್ ಬರಲಿ, ಬಿಡಲಿ ಎರಡನೇ ಡೋಸ್ ನೀಡಲು ಮುಂದಾಯ್ತು. ಇದೀಗ ಕೇಂದ್ರ ಸರ್ಕಾರವೇ ಕೋವಿನ್ ವೆಬ್ಸೈಟ್ ಅಭಿವೃದ್ಧಿಪಡಿಸಿದ್ದು, 18 ವರ್ಷ ಮೇಲ್ಪಟ್ಟವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬೇಕಿದೆ.