ಬೆಂಗಳೂರು: ದೇಶಾದ್ಯಂತ ನೂರಾರು ಶಾಖೆ ಹೊಂದಿರುವ ಸ್ಟಾಕ್ ಎಕ್ಸ್‌ಚೇಂಜ್ ಕಂಪನಿ ಕಾರ್ವಿ, ಸ್ಟಾಕ್ ಎಕ್ಸ್‌ಚೇಂಜ್ ಹೆಸರಲ್ಲಿ ಜನರಿಂದ ಹೂಡಿಕೆ ಮಾಡಿಸಿಕೊಂಡು ನೂರಾರು ಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ವಂಚನೆ ಎಸಗಿರುವ ಕಂಪನಿಯ ಮಾಲೀಕನನ್ನು ಹೈದರಾಬಾದ್ ಪೊಲೀಸರು ಬಂಧಿಸಿದರೆ, ಬೆಂಗಳೂರು ವಿಭಾಗದ ಮುಖ್ಯಸ್ಥನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡುತಿದ್ದ ಬೃಹತ್ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಸಾರ್ವಜನಿಕರ ಷೇರುಗಳನ್ನು ಅವರ ಗಮನಕ್ಕೆ ತಾರದೇ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟು ಲೋನ್ ಪಡೆದು ವಂಚಿಸಿರುವ ಆರೋಪ ಕಾರ್ವಿ ಟ್ರೇಡಿಂಗ್ ಕಂಪನಿ ವಿರುದ್ದ ಕೇಳಿಬಂದಿದೆ.
ಕೇಂದ್ರ ಕಚೇರಿ ಹೈದರಾಬಾದ್ನಲ್ಲಿದೆ:
ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿಯ ಮುಖ್ಯ ಕಚೇರಿ ಹೈದರಾಬಾದ್ನಲ್ಲಿದ್ದರೆ, ಬೆಂಗಳೂರಲ್ಲೂ 10ಕ್ಕೂ ಹೆಚ್ಚು ಬ್ರಾಂಚ್ ಆಫೀಸ್ಗಳನ್ನು ಹೊಂದಿದೆ. ದೇಶವ್ಯಾಪಿ 250ಕ್ಕೂ ಹೆಚ್ಚು ಶಾಖೆಗಳನ್ನು ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ಹೊಂದಿದೆ. ನಗರದಲ್ಲಿ ಸುಮಾರು 200 ಕೋಟಿಗೂ ಅಧಿಕ ಹಣವನ್ನು ಕಾರ್ವಿ ಟ್ರೇಡಿಂಗ್ ಕಂಪನಿ ವಂಚಿಸಿರುವ ಆರೋಪ ಕೇಳಿಬಂದಿದೆ.
ಕಾರ್ವಿ ಟ್ರೇಡಿಂಗ್ ಕಂಪನಿ ವಿರುದ್ಧ ನೂರಾರು ಜನರಿಂದ ದೂರು ಉದ್ಯಮಿಗೆ ವಂಚನೆ:
ಬಳ್ಳಾರಿ ಮೂಲದ ಉದ್ಯಮಿಗೆ ವಂಚನೆ ಮಾಡಿರುವ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಕಮಿಷನರ್ ಕಮಲ್ ಪಂತ್, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಸಿಸಿಬಿ ಪೊಲೀಸರು ಬೆಂಗಳೂರು ಕಾರ್ವಿ ಟ್ರೇಡಿಂಗ್ ಕಂಪನಿಯ ಮ್ಯಾನೇಜರ್‌ನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ವಿರುದ್ಧ ಈ ಹಿಂದೆ ಹೈದರಾಬಾದ್‌ನಲ್ಲಿ 563 ಕೋಟಿ ರೂ ವಂಚನೆ ಸಂಬಂಧ ದೂರು ದಾಖಲಾಗಿತ್ತು. ಕಂಪನಿಯ ಮುಖ್ಯಸ್ಥ ಪಾರ್ಥಸಾರಥಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬೇರೊಬ್ಬರ ಷೇರುಗಳು ಬ್ಯಾಂಕ್‌ನಲ್ಲಿ ಅಡಮಾನ:
ಷೇರು ಮಾರ್ಕೆಟ್ ಮೂಲಕ ಜನರಿಂದ ಟ್ರೇಡಿಂಗ್ ಹೆಸರಲ್ಲಿ ಕಾರ್ವಿ ಸ್ಟಾಕ್ ಎಕ್ಸ್‌ಚೇಂಜ್ ಕಂಪನಿ ಹಣ ಪಡೆಯುತ್ತಿತ್ತು. ಬೇರೊಬ್ಬರ ಹೆಸರಲ್ಲಿನ ಷೇರುಗಳನ್ನು ಬ್ಯಾಂಕ್‌ನಲ್ಲಿ ಅಡಮಾನವಿರಿಸಿ ಸಾಲವನ್ನು ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ಪಡೆದಿದೆ. ಇದೇ ರೀತಿ ಸಾವಿರಾರು ಜನ ಸೇರಿ ಹಲವಾರು ಉದ್ಯಮಿಗಳಿಗೆ ವಂಚಿಸಿರೋ ಆರೋಪ ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ಮೇಲಿದೆ.
ಪವರ್ ಆಫ್ ಅಟಾರ್ನಿ ಮೂಲಕ ಷೇರುಗಳು ಹಾಗೂ ಕಂಪನಿ ಸೆಕ್ಯೂರಿಟಿ ಬಾಂಡ್‌ಗಳನ್ನು ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದು ವಿಚಾರಣೆ ವೇಳೆ ಹೊರಬಂದಿದೆ. ಬ್ಯಾಂಕ್‌ನಿಂದ ಹಣ ಪಡೆದ ನಂತರ ಲೋನ್ ತೀರಿಸದೇ ಕಾರ್ವಿ ಕಂಪನಿ ಡಿಫಾಲ್ಟರ್ ಆಗಿತ್ತು. ಹೈದರಾಬಾದ್‌ನ ICICI ಬ್ಯಾಂಕ್ ಗೆ 563 ಕೋಟಿ ಇಂಡಸ್ ಲ್ಯಾಂಡ್ ಬ್ಯಾಂಕ್‌ಗೆ 137 ಕೋಟಿ ಸೇರಿ 2 ಸಾವಿರ ಕೋಟಿಗೂ ಅಧಿಕ ವಂಚನೆ ಆರೋಪ ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ವಿರುದ್ಧ ಕೇಳಿಬಂದಿದೆ.
ಸದ್ಯ ವಿಚಾರಣೆ ವೇಳೆ ಹಲವು ರಾಷ್ಟೀಕೃತ ಬ್ಯಾಂಕ್ಗಳಿಂದ ಲೋನ್ ಪಡೆದು ಹಿಂದಿರುಗಿಸದ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಈಗಾಗಲೇ ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿಯ ಸದಸ್ಯತ್ವವನ್ನು ರದ್ದು ಮಾಡಿದೆ. ಕಾರ್ವಿ ಸ್ಟಾಕ್ ಎಕ್ಸ್‌ಚೇಂಜ್ ಕಂಪನಿಯಲ್ಲಿ ಹಣಹೂಡಿಕೆ ಮಾಡಿ ಮೋಸ ಹೋದವರು ಕೂಡಲೇ ಬಂದು ದೂರು ನೀಡಿ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ.