ಬೆಂಗಳೂರು: ಒಂದು ರಾಷ್ಟ್ರ ಒಂದು ಪಡಿತರ ಯೋಜನೆ ಬಳಸಿಕೊಳ್ಳಲು ಆಹಾರ ಆಯುಕ್ತೆ ಶ್ಯಾಮಲಾ ಇಕ್ಬಾಲ್ ಕರೆ ನೀಡಿದ್ದಾರೆ.
ಉದ್ಯೋಗ ಮತ್ತು ಇತರ ಜೀವನೋಪಾಯಕ್ಕಾಗಿ ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ವಲಸೆ ಹೋಗುವವರಿಗೆ ಆಹಾರ ಭದ್ರತೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ ಜಾರಿಗೆ ತಂದಿದೆ. ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಅಂತ್ಯೋದಯ ಅನ್ನ ಅಥವಾ ಆದ್ಯತಾ ಪಡಿತರ ಚೀಟಿ ಹೊಂದಿರುವವರು ರಾಷ್ಟ್ರದ ಯಾವುದೇ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರಾದ ಶ್ಯಾಮಲಾ ಇಕ್ಬಾಲ್ ಮನವಿ ಮಾಡಿದ್ದಾರೆ.
ರಾಜ್ಯದೊಳಗೆ ಎಲ್ಲಾದರೂ ಪಡಿತರ ಪಡೆಯಬಹುದು:ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಡಿ, ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆ/ಆಧಾರ್ ಸಂಖ್ಯೆ ನೀಡಿ ಹೆಬ್ಬೆರಳಿನ ಜೀವಮುದ್ರೆ ನೀಡಿ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದು.
ಯಾವುದೇ ರಾಜ್ಯದವರು ಯಾವುದೇ ರಾಜ್ಯದಲ್ಲಿ ಪಡಿತರ ಪಡೆಯಬಹುದು:ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿದ್ದರೂ ಅಂಥವರು ಯಾವುದೇ ರಾಜ್ಯದಲ್ಲಾದರೂ ಪಡಿತರ ಚೀಟಿ ಸಂಖ್ಯೆ/ಆಧಾರ್ ಸಂಖ್ಯೆ ನೀಡಿ ಹೆಬ್ಬೆರಳಿನ ಮುದ್ರೆ ಮೂಲಕ ಪಡಿತರ ಪಡೆಯಬಹುದು.
ಪಡಿತರ ಚೀಟಿದಾರರ ನೋಂದಣಿ:ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ ಲಾಭ ಪಡೆಯಲು ಬಯಸುವ ಪಡಿತರ ಚೀಟಿದಾರರು ಭಾರತ ಸರ್ಕಾರದ ಮೇರಾ ರೇಷನ್ ಆ್ಯಪ್ ಅಥವಾ ಸಹಾಯವಾಣಿ ಸಂಖ್ಯೆ: 14445 ಕ್ಕೆ ಕರೆಮಾಡಿ ಒಂದು ನಿರ್ದಿಷ್ಟ ರಾಜ್ಯ/ಜಿಲ್ಲೆ/ಸ್ಥಳದಲ್ಲಿ ಪಡಿತರ ಪಡೆಯುವ ಬಗ್ಗೆ ನೋಂದಾಯಿಸಿಕೊಳ್ಳಬಹುದು.
“ಮೇರಾ ರೇಷನ್” ಆ್ಯಪ್:ಒಂದು ರಾಷ್ಟ್ರ ಒಂದು ಪಡಿತರ ಯೋಜನೆಯಡಿ ಪಡಿತರ ಪಡೆಯಲು ನೆರವಾಗಲು ಕೇಂದ್ರ ಸರ್ಕಾರವು ಮೇರಾ ರೇಷನ್ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಈ ಆ್ಯಪ್ ಅನ್ನು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಬಳಸಬಹುದು.
ಹೊಸ ರಾಜ್ಯದ ಪಡಿತರ ಚೀಟಿದಾರರಿಗೆ ಪಡಿತರ ಪ್ರಮಾಣ: ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಪಡಿತರ ಪಡೆಯಲು ಬಯಸುವ ಪಡಿತರ ಚೀಟಿದಾರರಿಗೆ ಕರ್ನಾಟಕದಲ್ಲಿ 2013ರ ಕಾಯ್ದೆಯಂತೆ ಪ್ರತಿ ಅಂತ್ಯೋದಯ ಅನ್ನ ಪಡಿತರ ಚೀಟಿಗೆ 35 ಕೆಜಿ ಅಕ್ಕಿ, ಆದ್ಯತಾ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 3 ರೂ. ದರದಲ್ಲಿ ವಿತರಿಸಲಾಗುವುದು.
ನ್ಯಾಯಬೆಲೆ ಅಂಗಡಿಗಳು ಪಡಿತರ ನಿರಾಕರಿಸುವಂತಿಲ್ಲ:ರಾಷ್ಟ್ರದ ಅಥವಾ ರಾಜ್ಯದ ಯಾವುದೇ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಹೋದಾಗ ಮಾಲೀಕರು ಪಡಿತರ ನೀಡಲು ತಿರಸ್ಕರಿಸುವಂತಿಲ್ಲ. ಯಾವುದೇ ಮಾಲೀಕರು ತಿರಸ್ಕರಿಸಿದರೆ ಸಹಾಯವಾಣಿಗೆ ದೂರು ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಉಚಿತ ಸಹಾಯವಾಣಿಗಳು:ಒಂದು ರಾಷ್ಟ್ರ ಒಂದು ಪಡಿತರ ಅಥವಾ ಪಡಿತರ ಪೋರ್ಟಬಿಲಿಟಿ ಯೋಜನೆಯ ಮಾಹಿತಿಗಳಿಗಾಗಿ ಕೇಂದ್ರ ಸರ್ಕಾರದ ಉಚಿತ ಸಹಾಯವಾಣಿ 14445 ಮತ್ತು ರಾಜ್ಯ ಸರ್ಕಾರದ ಉಚಿತ ಸಹಾಯವಾಣಿ 1967 ಉಪಯೋಗಿಸಬಹುದು ಎಂದು ತಿಳಿಸಿದ್ದಾರೆ.