ಬೆಂಗಳೂರು: ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಅಧ್ಯಾಪಕರು ತಮಗೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಟೌನ್‌ಹಾಲ್ ಎದುರು ಬೃಹತ್ ಹೋರಾಟ ನಡೆಸಿದ್ದಾರೆ.
ಸರ್ಕಾರ ಈಗಾಗಲೇ ಸರ್ಕಾರಿ ಶಾಲೆಯ ಬೋಧಕರಿಗೆ ನೀಡುತ್ತಿರುವ ಸವಲತ್ತುಗಳ ಯೋಜನೆಯನ್ನು ನಮಗೂ ವಿಸ್ತರಿಸಬೇಕು ಹಾಗೂ ನಿವೃತ್ತಿ ಬಳಿಕ ಅನುದಾನಿತ ನೌಕರರಿಗೆ ಜೀವನ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ನಮಗೆ ಪಿಂಚಣಿ ಸೌಲಭ್ಯ ಒದಗಿಸಿ ಕೊಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಟೌನ್‌ಹಾಲ್ ಎದುರು ಬೃಹತ್ ಹೋರಾಟ ಇನ್ನು ಪ್ರತಿಭಟನೆ ಮುಂದುವರಿಯುವ ಸೂಚನೆ ಸಿಕ್ಕಿದ ನಂತರ ಸ್ಥಳಕ್ಕೆ ಆಗಮಿಸಿದ ಸಚಿವ ಸುರೇಶ್ ಕುಮಾರ್ ಎದುರು, ಎಂಎಲ್ಸಿ ಪುಟ್ಟಣ್ಣಯ್ಯ ಮಾತನಾಡಿ, ನಾವು ಚಿಕ್ಕವರಿಂದಲೂ ನಿಮ್ಮ ಆದರ್ಶ ಬದುಕನ್ನ ನೋಡಿ ಬೆಳೆದಿದ್ದೇವೆ. ಹಾಗೇ ನಮ್ಮ ಬೇಡಿಕೆಗಳನ್ನು ತಮ್ಮ ಅವಧಿಯಲ್ಲಿ ಪೂರೈಸುತ್ತೀರಿ ಎಂಬ ನೀರಿಕ್ಷೆಯನ್ನು ತಮ್ಮ ಮೇಲೆ ಇಟ್ಟುಕೊಂಡಿದ್ದೇವೆ ಎಂದರು.
ನಂತರ ಅಧ್ಯಾಪಕರನ್ನು ಕುರಿತು ಮಾತನಾಡಿದ ಶಿಕ್ಷಣ ಸಚಿವರು, ಪ್ರತಿಭಟನೆ ವೇಳೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ ಶಿಕ್ಷಕನಿಗೆ ತರಾಟೆಗೆ ತೆಗೆದುಕೊಂಡರು. ಆತ್ಮಹತ್ಯೆ ಎಂಬ ಪದ ಯಾರ ಬಾಯಲ್ಲೂ ಬರಬಾರದು, ನಿಮ್ಮ ಪಿಂಚಣಿ ಮತ್ತು ಆರೋಗ್ಯ ವಿಮೆಯ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿವೆ. ಈ ಬಗ್ಗೆ ಅಧಿಕೃತವಾಗಿ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿಕೊಡುತ್ತೇನೆ, ನೀವು ಹೇಳುತ್ತಿರುವುದರಲ್ಲಿ ನ್ಯಾಯವಿದೆ ಎಂದರು.