ಬೆಂಗಳೂರು: ಕಳಪೆ ಗುಣಮಟ್ಟದ ಉತ್ಪನ್ನವನ್ನು ಗ್ರಾಹಕರಿಗೆ ರವಾನಿಸಿ, ನಾವು ಉತ್ಪನ್ನಗಳಿಗೆ ಮಾರುಕಟ್ಟೆ ವೇದಿಕೆ ಒದಗಿಸುತ್ತೇವೆ, ಯಾವುದೇ ಉತ್ಪನ್ನವನ್ನು ಸಿದ್ಧಪಡಿಸುವುದಿಲ್ಲ ಎಂಬುದಾಗಿ ವಾದಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಂದಾಗಿದ್ದ ಪ್ರತಿಷ್ಠಿತ ಇ-ಕಾಮರ್ಸ್ ಕಂಪೆನಿಯೊಂದಕ್ಕೆ ನಗರದ ಗ್ರಾಹಕರ ವಿವಾದಗಳ ಪರಿಹಾರ ಆಯೋಗ ತರಾಟೆಗೆ ತೆಗೆದುಕೊಂಡಿದ್ದು 15 ಸಾವಿರ ರೂ. ದಂಡ ವಿಧಿಸಿದೆ.
ಇ ಕಾಮರ್ಸ್ ಕಂಪನಿ ಉತ್ಪನ್ನ ಸಿದ್ಧಪಡಿಸುವುದಿಲ್ಲ ಎಂದಾದರೆ ಅದು ಕಳಪೆ ಗುಣಮಟ್ಟದ ವಸ್ತುಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿದೆ. ಇದೊಂದು ಅನ್ಯಾಯದ ನಡೆಯಾಗಿದ್ದು, ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರಗಾರಿಕೆಯಾಗಿದೆ ಎಂದು ನಗರದ ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಎಂ.ಶೋಭಾ, ಸದಸ್ಯರಾದ ಬಿ.ದೇವರಾಜು, ವಿ.ಅನುರಾಧ ಅವರಿದ್ದ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಇ-ಕಾಮರ್ಸ್ ವೇದಿಕೆಯಿಂದ ದಂಡದ ರೂಪದಲ್ಲಿ ಪಡೆದ ಮೊತ್ತವನ್ನು ನೊಂದ ಗ್ರಾಹಕರಿಗೆ ಪರಿಹಾರದ ರೂಪದಲ್ಲಿ ಮೂರು ತಿಂಗಳಲ್ಲಿ ನೀಡಲು ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ನಗರದ ಟಿಎಂಕ್ಯೂ ಅಧಿಕಾರಿಗಳ ಕ್ವಾಟ್ರಸ್ನಲ್ಲಿ ನೆಲೆಸಿರುವ ಮೇಜರ್ ಡಿ. ಭುವನೇಶ್ವರಿ ಎಂಬುವವರು ಇ-ಕಾಮರ್ಸ್ ವೇದಿಕೆಯಲ್ಲಿ ಅತ್ಯಂತ ಆಕರ್ಷಕವಾಗಿ ಕಂಡಿದ್ದ ಮನೆಯಲ್ಲಿಯೇ ಬಳಸಬಹುದಾದ 40 ಕೆ.ಜಿ ತೂಕದ ದೇಹದಾರ್ಢ್ಯ ಉಪಕರಣವನ್ನು 2,699 ರೂ.ಗಳನ್ನು ಪಾವತಿಸಿ ಆನ್ಲೈನ್ ಮೂಲಕ ಖರೀದಿಸಿದ್ದರು.
ಉಪಕರಣ ಮನೆಗೆ ಬಂದ ಬಳಿಕ ಬಾಕ್ಸ್ ತೆಗೆದು ನೋಡಿದಾಗ ಉಪಕರಣ ಕಳಪೆ ಗುಣಮಟ್ಟದ್ದಾಗಿತ್ತು. ಜತೆಗೆ, ತೂಕದ ವಸ್ತುಗಳಲ್ಲಿ ಮಣ್ಣು ತುಂಬಿದ್ದು, ಒಡೆದು ಹೋಗಿತ್ತು. ಇದರಿಂದ ನಿರಾಶೆಗೊಳಗಾದ ಗ್ರಾಹಕರು ಕಸ್ಟಮರ್ ಕೇರ್ಗೆ ಸಂಪರ್ಕ ಮಾಡಿ ದೂರು ದಾಖಲಿಸಿದರು. ಅಲ್ಲದೇ, ಉಪಕರಣ ಹಿಂಪಡೆದು ಹಣ ಪಾಪಸ್ ಮಾಡಲು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಸ್ಟಮರ್ ಕೇರ್ನ ಪ್ರತಿನಿಧಿ, ತಾವೇ ಸ್ವಂತ ವೆಚ್ಚದಲ್ಲಿ ಉಪಕರಣ ಪ್ಯಾಕ್ ಮಾಡಿ ಕೊರಿಯರ್ ಮೂಲಕ ಹಿಂದಿರುಗಿಸಲು ಸೂಚನೆ ನೀಡಿದ್ದರು. ಅಲ್ಲದೇ, ಉಪಕರಣ ಉಗ್ರಾಣ ಸೇರಿದ ಬಳಿಕ ಪ್ಯಾಕೇಜ್ ಮತ್ತು ಕೊರಿಯರ್ನ ಶುಲ್ಕವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು. ನಂತರ ಸುಮಾರು 45 ಕೆಜಿ ತೂಕರ ಉಪಕರಣವನ್ನು 2,150 ರೂ.ಗಳಲ್ಲಿ ಕೊರಿಯರ್ ಮತ್ತು 300 ರೂ.ಗಳಲ್ಲಿ ಪ್ಯಾಕೇಜ್ ಮಾಡಿ ಹಿಂದಿರುಗಿಸಿದ್ದರು. ಈ ಸಂಬಂಧ ಉಗ್ರಾಣ ತಲುಪಿರುವುದಾಗಿ ಕೊರಿಯರ್ ಸಂಸ್ಥೆಯಿಂದ ಸಂದೇಶವೂ ಲಭ್ಯವಾಗಿತ್ತು.
ಈ ನಡುವೆ ಇ-ಕಾಮರ್ಸ್ ಕಸ್ಟಮರ್ ಕೇರ್ಗೆ ಮತ್ತೆ ಕರೆ ಮಾಡಿ ಪ್ಯಾಕೇಜಿಂಗ್ಗಾಗಿ 300 ರೂ. ಮತ್ತು ಕೊರಿಯರ್ ಚಾಜ್ರ್ಗೆ 2,150 ರೂ.ಗಳಾಗಿದೆ ಎಂದು ವಿವರಿಸಿದ್ದರು. ಇದಕ್ಕೆ ಪ್ರತಿನಿಧಿ ಸಮ್ಮತಿಸಿದ್ದರು. ಜೊತಗೆ ಇ-ಮೇಲ್ ಮೂಲಕ ಒಪ್ಪಿಗೆ ಸೂಚಿಸಿ, ಕೊರಿಯರ್ ಬಿಲ್ನ್ನು ರವಾನಿಸಲು ಸೂಚಿಸಿದ್ದರು. ನಂತರ ಉಪಕರಣದ ವೆಚ್ಚ ಹಾಗೂ ಕೊರಿಯರ್ ಕಳಿಸಿದ ವೆಚ್ಚ ಸೇರಿ ಒಟ್ಟು 5,137 ಕೊಡಲು ಒಪ್ಪಿಗೆ ಸೂಚಿಸಲಾಗಿತ್ತು.