ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ತಡೆಯುತ್ತಿಲ್ಲ ಎಂದು ಸಂಚಾರ ನಿಯಮಗಳನ್ನು ಉಲ್ಲಂಘಿಸಬಹುದು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ರಸ್ತೆಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವುದನ್ನು ಕಡಿಮೆ ಮಾಡಿರುವ ಬೆಂಗಳೂರು ಸಂಚಾರಿ ಪೊಲೀಸರು ಐಟಿಎಂಎಸ್ (ಇಂಟಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ) ಮೂಲಕ ದಂಡ ವಿಧಿಸುತ್ತಿದ್ದಾರೆ.
ಎರಡು ತಿಂಗಳಲ್ಲಿ ವಿಧಿಸಿದ ದಂಡ ಎಷ್ಟು?:ಕಳೆದ ವರ್ಷ ಡಿಸೆಂಬರ್‌ನಲ್ಲಿ ಐಟಿಎಂಎಸ್ ಕ್ಯಾಮೆರಾ ವ್ಯವಸ್ಥೆಯನ್ನು ಆರಂಭಿಸಿರುವ ಸಂಚಾರಿ ಪೊಲೀಸರು, ಈ ವರ್ಷದ ಆರಂಭದಿಂದಲೇ ವಾಹನಗಳನ್ನು ತಡೆದು ದಂಡ ವಿಧಿಸುವುದನ್ನು ಕಡಿಮೆ ಮಾಡಿದ್ದಾರೆ. ಐಟಿಎಂಎಸ್ ಮೂಲಕ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ ಕಳೆದ ಮೂರೂವರೆ ತಿಂಗಳಿನ ಅವಧಿಯಲ್ಲಿ ಬರೋಬ್ಬರಿ 19,04,227 ಪ್ರಕರಣಗಳನ್ನು ದಾಖಲಿಸಿದ್ದಾರೆ.