ಬೆಂಗಳೂರು : ಲೇಖನಿ ಮನುಷ್ಯನಿಗೆ ಸಿಕ್ಕ ಪ್ರಬಲ ಅಸ್ತ್ರ. ಒಳ್ಳೆಯ ಯೋಚನೆಗಳು ವ್ಯಕ್ತಿ ಹೋದ ಬಳಿಕ ಅಳಿಸಿ ಹೋಗುತ್ತದೆ. ಅದನ್ನು ದಾಖಲಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ. ಆದ್ದರಿಂದಲೇ ಗ್ರಂಥಾಲಯದಲ್ಲಿ ಪ್ರಪಂಚದ ಬೇರೆ ಬೇರೆ ವಿಚಾರಗಳು ಸಿಗುತ್ತವೆ. ಒಂದು ವೇಳೆ ಅಕ್ಷರ ಇರದಿದ್ದರೆ ಖಾಲಿ ಹಾಳೆಗಳ ಗೋದಾಮು ಅದಾಗುತ್ತಿತ್ತು. ಹಾಗಾಗಿ ಅಕ್ಷರದ ಆರಾಧನೆ ಅಗತ್ಯ ಎಂದು ಕನ್ನಡದ ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಅಭಿಪ್ರಾಯಪಟ್ಟರು.
ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ಬಿ.ಪಿ ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನದಿಂದ 8 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಯುದ್ಧ, ಪ್ರೇಮಕಥೆ, ಶಾಂತಿಗೆ ಅಕ್ಷರ ಕಾರಣವಾಗುತ್ತದೆ. ಸಾವಿರಾರು ವರ್ಷಗಳ ಹಿಂದೆ ಒಬ್ಬರ ಮೆದುಳಿನಲ್ಲಿ ಹೊಳೆದ ಯೋಚನೆ ಓದುಗನನ್ನು ಪ್ರೇರೇಪಿಸುವುದು ಬರವಣಿಗೆಗೆ ಇರುವ ಶಕ್ತಿಯಾಗಿದೆ. ಪುಸ್ತಕ ಬರೆಯುವುದು ಸುಲಭವಲ್ಲ. ಅದು ವ್ಯಕ್ತಿಯ ಅಭಿವ್ಯಕ್ತಿಯ ಪ್ರತಿನಿಧಿಯಾಗಿರುತ್ತದೆ. ಪುಸ್ತಕ, ಸಿನಿಮಾ ಹಿಟ್ ಆಗಲು ಓದುಗರು, ಪ್ರೇಕ್ಷಕರು ಹಾಗೂ ಬರೆದವರ ಮೆದುಳು ಸಿಂಕ್ ಆಗಬೇಕು. ಹಾಗೆಯೇ ಓದುಗನ ಸೆನ್ಸಿಟಿವಿಟಿ ಹಾಗೂ ಬರೆದವರ ಸೆನ್ಸಿಟಿವಿಟಿ ಮ್ಯಾಚ್ ಆಗಬೇಕು ಎಂದು ಹೇಳಿದರು.
ನುಡಿ ಪಡಿ ಪುಸ್ತಕದ ಲೇಖಕ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಮಾತನಾಡಿ ನಮ್ಮ ರಾಜ್ಯದ ರಸ್ತೆಗಳು ಚೆನ್ನಾಗಿ ಇದ್ದರೆ ಕಾರಲ್ಲಿ ಪುಸ್ತಕ ಬರೆಯಬಹುದಾಗಿತ್ತು. ಆದರೆ ಆ ಸ್ಥಿತಿ ಇಲ್ಲ. ನನ್ನದು ಅನುಭವದ ಬರಹವಾಗಿದೆ. ವಯಸ್ಸಿನ ಕಾರಣ ಆಧ್ಯಾತ್ಮಿಕ ಒಲವು ಜಾಸ್ತಿ ಆಗುತ್ತಿದೆ. ಸಾಹಿತ್ಯದಲ್ಲಿ ಎರಡು ಪ್ರಾಕಾರ ಒಂದು ಶಾಶ್ವತ ಹಾಗೂ ಇನ್ನೊಂದು ತೂಕದ ಸಾಹಿತ್ಯ. ರಾಮಾಯಣ, ಮಹಾಭಾರತ ಶಾಶ್ವತ ಸಾಹಿತ್ಯ ಪ್ರಾಕಾರಗಳಾದರೆ. ಹಳೆಗನ್ನಡ ಸಾಹಿತ್ಯ ತೂಕದ ಸಾಹಿತ್ಯವಾಗಿದೆ. ಇತ್ತೀಚೆಗೆ ತತ್ವ ಹೇಳಿದರೂ ಪುಸ್ತಕ ಸುಡಲಾಗುತ್ತದೆ. ಅದು ಸುಟ್ಟವನ ಸಂಸ್ಕಾರ ತೋರಿಸುತ್ತದೆ ಎಂದರು.
ಲೇಖಕರಾದ ಜೋಗಿ ಮಾತನಾಡಿ ಪ್ರಕಾಶಕರು ಹಣ, ಸಮಯ ಹಾಕಿ ಪುಸ್ತಕ ಹೊರತರುತ್ತಾರೆ. ಜನರು ಓದಿದಾಗಲೆ ಅದು ಪುಸ್ತಕ ಆಗುತ್ತದೆ. ಇಲ್ಲವಾದರೆ ಅದು ಖಾಲಿ ಕಾಗದವಷ್ಟೇ. ಪುಸ್ತಕಕ್ಕೆ ಸಾವಿಲ್ಲ. ಐದಾರು ವರ್ಷದ ಹಿಂದೆ ಓಟಿಟಿ ಬಂದಿದ್ದರಿಂದ ಪುಸ್ತಕದ ಕತೆ ಮುಗಿಯಿತು ಎನ್ನಲಾಗುತ್ತಿತ್ತು ಆದರೆ ಅದಾಗಲಿಲ್ಲ. ಇದು ಅಕ್ಷರಗಳ ಮಹಿಮೆಯಾಗಿದೆ ಎಂದು ತಿಳಿಸಿದರು.