ಬೆಂಗಳೂರು: ಅನಾರೋಗ್ಯದಿಂದ ವಿಧಿವಶವರಾದ ಉಡುಪಿಯ ಪೇಜಾವರ ಶ್ರೀಗಳ ಅಗಲಿಕೆಗೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪೇಜಾವರ ಶ್ರೀಗಳು ವಿಧಿವಶ ಗಣ್ಯರಿಂದ ಸಂತಾಪ ಸ್ಪೀಕರ್ ಕಾಗೇರಿ, ಬಸವರಾಜ ಹೊರಟ್ಟಿ ಸಂತಾಪ:
ಪೇಜಾವರ ಶ್ರೀಗಳ ಅಗಲಿಕೆಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದು, ಸ್ವಾಮೀಜಿಯವರು ದೈವಾದೀನರಾಗಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಉಡುಪಿಯಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸನಾತನ ಹಿಂದೂ ಧರ್ಮದ ಪ್ರಭಲ ಪ್ರತಿಪಾದಕರಾಗಿ ಅಯೋಧ್ಯೆಯಲ್ಲಿಯೇ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವಾಗಬೇಕೆಂದು ಗಟ್ಟಿ ಧ್ವನಿಯಲ್ಲಿ ಆಗ್ರಹಿಸಿದ್ದರು ಎಂದಿದ್ದಾರೆ.
ಪೇಜಾವರ ಶ್ರೀಗಳ ನಿಧನಕ್ಕೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪೇಜಾವರ ಶ್ರೀಗಳ ನಿಧನ ನಾಡಿಗೆ ನೋವು ತಂದಿದೆ. ಶ್ರೀಗಳ ಅಗಲಿಕೆಯಿಂದ ರಾಜ್ಯ ಹಾಗೂ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಧಾರ್ಮಿಕ ಮತ್ತು ಸಾಮಾಜಿಕವಾಗಿ ಅವರು ಎಲ್ಲಾ ಮಠಾಧೀಶರಿಗೆ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದ್ದಾರೆ.
ಶೋಕ ಸಂದೇಶ ಹೊರಡಿಸಿದ ಈಶ್ವರ ಖಂಡ್ರೆ:
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಶೋಕ ಸಂದೇಶ ಹೊರಡಿಸಿರುವ ಅವರು, ವಿವಿಧ ಕ್ಷೇತ್ರಗಳಲ್ಲಿ ಶ್ರೀಗಳ ಸೇವೆ ಅವಿಸ್ಮರಣೀಯ. ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದು ನಾಡಿಗೆ ಅಮೋಘವಾದ ಸೇವೆ ಸಲ್ಲಿಸಿದ್ದಾರೆ. ಇಂತಹ ಶ್ರೀಗಳನ್ನು ಕಳೆದುಕೊಂಡು ಕರ್ನಾಟಕವಷ್ಟೆ ಅಲ್ಲದೆ ಭಾರತ ದೇಶ ಬಡವಾಗಿದೆ. ಶ್ರೀಗಳ ಆತ್ಮಕ್ಕೆ ಶಾಂತಿ ಕೊಡುವ ಮೂಲಕ ಭಗವಂತ ಭಕ್ತರಿಗೆ ಅವರ ಅಗಲಿಕೆ ತುಂಬುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಶ್ರೀಗಳು ಹಿಂದೂ ಧರ್ಮಕ್ಕೆ ಚೈತನ್ಯ ತುಂಬಿದವರು: ಪಟ್ಟಣಶೆಟ್ಟಿ
ಪೇಜಾವರ ಶ್ರೀಗಳ ಅಗಲಿಕೆ ಹಿಂದೂ ಧರ್ಮಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕಂಬನಿ ಮಿಡಿದಿದ್ದಾರೆ. ಶ್ರೀಗಳು ವಿಶ್ವ ಹಿಂದೂ ಪರಿಷತ್ತಿನ ಮಾರ್ಗದರ್ಶಕರಾಗಿ ಹಿಂದೂ ಅಧ್ಯಾತ್ಮಿಕ ಪರಂಪರೆ ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು. ವಿಜಯಪುರಕ್ಕೂ ಪೇಜಾವರ ಶ್ರೀಗಳಿಗೂ ಅವಿನಾಭಾವ ಸಂಭಂದವಿತ್ತು. ಪ್ರತಿವರ್ಷ ಶ್ರೀಗಳು ವಿಜಯಪುರ ಜಿಲ್ಲೆಗೆ ಆಗಮಿಸುತ್ತಿದ್ದರು. ಶ್ರೀಗಳು ಹಿಂದೂ ಧರ್ಮಕ್ಕೆ ಚೈತನ್ಯ ತುಂಬಿದವರು ಎಂದು ತಿಳಿಸಿದ್ದಾರೆ.
ಎಸ್,ಎಮ್ ಕೃಷ್ಣ ಶೋಕ ಸಂದೇಶ:
ನಮ್ಮೆಲ್ಲರ ಪ್ರೀತಿ, ಗೌರವ, ಭಕ್ತಿಗೆ ಪಾತ್ರರಾಗಿ ಇಡೀ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಶ್ರೇಷ್ಠ, ದೇವ ಸ್ವರೂಪಿ ಯತಿವರೇಣ್ಯರಾಗಿದ್ದ ಶ್ರೀ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ಶ್ರೀಕೃಷ್ಣನಲ್ಲಿ ಐಕ್ಯರಾದರೂ, ಅವರ ತತ್ವ, ಆದರ್ಶಗಳಿಂದಾಗಿ ಸದಾ ಅವರು ನಮ್ಮೊಂದಿಗಿರುತ್ತಾರೆ ಎಂಬುದು ನನ್ನ ಭಾವಪೂರ್ಣ ಅನಿಸಿಕೆ ಎಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಅವರಿಗೆ ನನ್ನ ಅಂತಿಮ ನಮನಗಳು. ಶ್ರೀಗಳು ನನ್ನ ನಿವಾಸಕ್ಕೆ ಆಗಮಿಸಿ ಕೃಷ್ಣ ಪೂಜೆ ನೆರವೇರಿಸಿದನ್ನು ಮರೆಯಲಾಗದು. ಪೇಜಾವರ ಶ್ರೀಗಳೆಂದರೆ ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಮಾಜಿಕ, ಸಮಕಾಲೀನ ಚಟುವಟಿಕೆಗಳಲ್ಲಿಯೂ ಸದಾ ಮುಂಚೂಣಿಯಲ್ಲಿರುತಿದ್ದರು ಎಂದು ಸ್ಮರಿಸಿದ್ದಾರೆ.
90ರ ನಂತರ ಜನಿಸಿದವರಿಗೆ ಶ್ರೀಗಳು ಆದರ್ಶರಾಗಿದ್ದರು : ತೇಜಸ್ವಿ ಸೂರ್ಯ
ಸಮಾಜದಲ್ಲಿ ಜಾತಿಗಳ ನಡುವೆ ಸಾಮರಸ್ಯ ಮೂಡಿಸುವಲ್ಲಿ ಸ್ವಾಮೀಜಿಗಳ ಕಾರ್ಯ ಮಹತ್ವದ್ದಾಗಿತ್ತು, ಪೇಜಾವರ ಶ್ರೀಗಳು 90ರ ನಂತರ ಜನಿಸಿದವರಿಗೆ ಆದರ್ಶ ವ್ಯಕ್ತಿಗಳಾಗಿದ್ದರು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಪರಮಪೂಜ್ಯ ವಿಶ್ವೇಶ್ವರ ತೀರ್ಥ ಶ್ರೀಗಳ ನಿಧನದ ವಾರ್ತೆ ದೇಶಕ್ಕೆ ಗೊತ್ತಿದೆ. ಭಾರತದಾದ್ಯಂತ ಶ್ರೀಗಳಿಗೆ ಅಪಾರ ಅಭಿಮಾನಿಗಳಿದ್ದಾರೆ. ಸಿದ್ದಗಂಗಾ ಶ್ರೀ, ಬಾಲಗಂಗಾಧರ ಸ್ವಾಮೀಜಿ ಹಾಗೂ ವಿಶ್ವೇಶ್ವರ ಶ್ರೀಗಳು ಮೂರುಜನ ಸ್ವಾಮೀಜಿಗಳಿಂದ ಸಮಾಜದ ಮೇಲೆ ಅಪಾರ ಪ್ರಭಾವ ಬೀರಿದೆ.
ಪೇಜಾವರ ಶ್ರೀಗಳ ನಿಧನದೊಂದಿಗೆ ಈ ಮೂವರು ಸಂತರ ಕಾಲ ಅಂತ್ಯವಾಗಿದೆ ಎಂದಿದ್ದಾರೆ.
ಸಂತರ ಗ್ರಂಥದಲ್ಲಿನ ಒಂದು ಅದ್ಭುತವಾದ ಪುಟ ಪೇಜಾವರ ಶ್ರೀ : ಹಂಸಲೇಖ
ಪೇಜಾವರ ಶ್ರೀಗಳ ನಿಧನಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಸಂತಾಪ ವ್ಯಕ್ತಪಡಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿ, ಪ್ರತಿಯೊಂದು ಜೀವಕ್ಕೂ ಒಂದು ಕೊನೆಯಿದೆ. ಪೇಜಾವರ ಶ್ರೀಗಳದ್ದು ಒಂದು ಸಂಪೂರ್ಣ ಜೀವನ. ಆದರೆ ಅವರ ಕನಸು ಅಪೂರ್ಣವಾಗಿದೆ ಎನಿಸುತ್ತದೆ. ಶ್ರೀಗಳಿಗೆ ದೊಡ್ಡ ಕನಸಿತ್ತು. ಅವರ ಜೀವಿತಾವಧಿಯಲ್ಲಿ ಆ ಕನಸು ನನಸಾಗಬೇಕಾಗಿತ್ತು. ಭಾರತೀಯ ಸಂಸ್ಕೃತಿಯನ್ನು ರಾಜಕೀಯ ಗದ್ದುಗೆ ಬಳಿ ನಿಲ್ಲಿಸಿ ಮಾನವೀಯತೆಯ ಏಕತೆಯನ್ನು, ವಿದ್ಯೆ ಶಿಕ್ಷಣವನ್ನು ಸರ್ವರಿಗೂ ಅರ್ಪಿಸಿದವರು ಪೇಜಾವರ ಶ್ರೀಗಳು, ಸಂತರ ಗ್ರಂಥದಲ್ಲಿನ ಒಂದು ಅದ್ಭುತವಾದ ಪುಟ ಎಂದು ಬಣ್ಣಿಸಿದರು.
ಉಡುಪಿ ಒಂದು ಸಾಂಸ್ಕೃತಿಕ ಶಕ್ತಿ ಕೇಂದ್ರ. ಪೇಜಾವರ ಪೀಠ ನನಗೆ ಬಹಳ ಇಷ್ಟ . ನಾನು ಸಂಗೀತ ನಿರ್ದೇಶಕನಾಗಿ ಹೆಸರು ಮಾಡಿದಾಗ ಉಡುಪಿಯಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ನೀಡಿದ್ದರು. ಈ ಸಂದರ್ಭದಲ್ಲಿ ಅವರು ನನ್ನೊಂದಿಗೆ ಧರ್ಮ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡಿದ್ದರು. ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಯೇಸುದಾಸ್ ಒಂದೇ ವೇದಿಕೆಯಲ್ಲಿ ಹಾಡಿದ್ದರು ಎಂದು ಸ್ಮರಿಸಿಕೊಂಡರು.