ಬೆಂಗಳೂರು: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಾಮತೀರ್ಥಂನ ಬೋಡಿಕೊಂಡ ಬೆಟ್ಟದ ಮೇಲಿರುವ ಪ್ರಾಚೀನ ಸೀತಾ ಲಕ್ಷ್ಮಣ ಕೋದಂಡರಾಮ ದೇವಸ್ಥಾನದಲ್ಲಿ ಇತ್ತೀಚೆಗೆ ಭಗವಾನ್ ರಾಮ್ ವಿಗ್ರಹ ಧ್ವಂಸ ಪ್ರಕರಣ ಇಡೀ ಹಿಂದೂ ಸಮುದಾಯವನ್ನು ಕೆರಳಿಸಿದ್ದು, ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರಾಮತೀರ್ಥ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪೇಜಾವರ ಶ್ರೀಗಳು ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ದುಷ್ಕರ್ಮಿಗಳು ಐತಿಹಾಸಿಕ ದೇವಾಲಯವನ್ನು ತೆರೆದು ಗರ್ಭಗುಡಿಯಲ್ಲಿ 400 ವರ್ಷಗಳ ಹಳೆಯ ರಾಮ್ ವಿಗ್ರಹವನ್ನು ತುಂಡರಿಸಿ ಅಪವಿತ್ರಗೊಳಿಸಿದ್ದಾರೆ. ವಿಗ್ರಹದ ಕತ್ತರಿಸಿದ ಭಾಗವನ್ನು ದೇವಾಲಯದ ಸಮೀಪದ ಕೊಳದಲ್ಲಿ ಪತ್ತೆ ಮಾಡಲಾಗಿದೆ. ಸುಮಾರು 20 ದಿನಗಳ ಹಿಂದೆ ಈ ಘಟನೆ ನಡೆದಿದೆ. ಆದರೆ ಆಂಧ್ರಪ್ರದೇಶ ಸರ್ಕಾರ ದುಷ್ಕರ್ಮಿಗಳನ್ನು ಬಂಧಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ದೇವಾಲಯದ ಮೇಲೆ ವಿಧ್ವಂಸಕ ಕೃತ್ಯಗಳ ಘಟನೆಗಳಿಗೆ ಆಂಧ್ರಪ್ರದೇಶ ಸಾಕ್ಷಿಯಾಗಿದೆ. ಕಳೆದ ಫೆಬ್ರವರಿಯಲ್ಲಿ ಬಿತ್ರಗುಂಟಾ (ನೆಲ್ಲೂರು) ನಲ್ಲಿ ದೇವಾಲಯದ ರಥಗಳನ್ನು, ಸೆಪ್ಟೆಂಬರ್ನಲ್ಲಿ ಅಂಟಾರ್ವೇದಿ (ಪೂರ್ವ ಗೋದಾವರಿ) ಮತ್ತು ಜನವರಿಯಲ್ಲಿ ಪಿತಾಪುರಂನಲ್ಲಿ ಹಲವಾರು ಹಿಂದೂ ವಿಗ್ರಹಗಳನ್ನು ಅಪವಿತ್ರಗೊಳಿಸಿರುವುದು ಕಳೆದ ವರ್ಷ ವರದಿಯಾದ ಕೆಲವು ದುರುದ್ದೇಶಪೂರಿತ ಕೃತ್ಯಗಳಾಗಿವೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.