ಬೆಂಗಳೂರು: ಭಾರ ಸಾಮರ್ಥ್ಯ ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಸ್ಥಗಿತ ಮಾಡಲಾಗಿದ್ದ ಪೀಣ್ಯ ಮೇಲ್ಸೇತುವೆಯನ್ನು ಲಘು ವಾಹನಗಳ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಮುಕ್ತಗೊಳಿಸಿದ್ದಾರೆ. ಈ ಮೂಲಕ ಮೂರು ದಿನಗಳಿಂದ ವಾಹನ ದಟ್ಟಣೆಯ ನರಕ ಅನುಭವಿಸಿದ್ದ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಭಾರ ಸಾಮ್ಯರ್ಥ ಪರೀಕ್ಷೆ ಹಿನ್ನೆಲೆಯಲ್ಲಿ ಕಳೆದ 16ರ ರಾತ್ರಿ 11 ಗಂಟೆಯಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲೋಡ್ ಟೆಸ್ಟಿಂಗ್ ನಡೆಸಿತ್ತು. ಈ ಅವಧಿಯಲ್ಲಿ ಬೈಕ್, ಕಾರು, ಆಟೋ ಸೇರಿದಂತೆ ಮತ್ತಿತರ ಲಘು ವಾಹನಗಳ ಸಂಚಾರ ಮೇಲ್ಸೇತುವೆಯಲ್ಲಿ ಬಂದ್ ಮಾಡಲಾಗಿತ್ತು. 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯವಾಗಿತ್ತು. ಇದರಿಂದ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಶಾಲಾ - ಕಾಲೇಜುಗಳಿಗೆ ಹೋಗುವವವರು, ತರಕಾರಿ ಸೇರಿದಂತೆ ಇನ್ನಿತರ ಸರಕು - ಸಾಮಗ್ರಿಗಳನ್ನು ಲಘು ವಾಹನಗಳಲ್ಲಿ ಹೊತ್ತುಕೊಂಡು ಬರುವ ವ್ಯಾಪಾರಿಗಳಿಗೆ ಅನಾನುಕೂಲವಾಗಿತ್ತು. ಒಂದೆರಡು ಕಿಲೋಮಿಟರ್ ಚಲಿಸಲು ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಪ್ರಯಾಣಿಸಬೇಕಾದ ಸನ್ನಿವೇಷ ಸೃಷ್ಟಿಯಾಗಿತ್ತು. ಇದೀಗ ಲೋಡ್ ಟೆಸ್ಟಿಂಗ್ ಮುಗಿದ ಹಿನ್ನೆಲೆ ಇಂದು ಬೆಳಗ್ಗೆ 11 ಗಂಟೆಯಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಲೋಡ್ ಟೆಸ್ಟಿಂಗ್ ವರದಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದು, ಅಲ್ಲಿಯವರೆಗೆ ದೊಡ್ಡ ಮಟ್ಟದ ವಾಹನಗಳ ಸಂಚಾರವನ್ನು ಮೇಲ್ಸೇತುವೆಯಲ್ಲಿ ನಿರ್ಬಂಧ ಮುಂದುವರೆಯಲಿದೆ ಎಂದು ಪೀಣ್ಯ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಜನವರಿ 19 ರವರೆಗೂ ಪೀಣ್ಯ ಫ್ಲೈ ಓವರ್ ಬಂದ್: ಪರ್ಯಾಯ ಮಾರ್ಗಗಳೇನು?
ತುಮಕೂರು ರಾಷ್ಟ್ರೀಯ ಹೆದ್ದಾರಿಯ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿಷೇಧಿಸಿತ್ತು. ಇದೀಗ ಮೇಲ್ಸೇತುವೆ ದುರಸ್ತಿ ಕಾರ್ಯ ಮುಕ್ತಾಯವಾಗಿದ್ದು, ಪರೀಕ್ಷಾರ್ಥ ದೃಷ್ಟಿಯಿಂದ ಜ.16ರ ರಾತ್ರಿ 11 ಗಂಟೆಯಿಂದ ಜ.19ರ ಬೆಳಗ್ಗೆ 11 ಗಂಟೆವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಈಗ ಪರೀಕ್ಷಾರ್ಥ ಪ್ರಯೋಗ ಮುಕ್ತಾಯಗೊಂಡಿರುವುದರಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈ ಓವರ್ ಪಕ್ಕದ ಎನ್.ಹೆಚ್.-4 ರಸ್ತೆ ಹಾಗೂ ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್ಆರ್ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಲು ಅನುಕೂಲ ಮಾಡಿಕೊಡಲಾಗಿತ್ತು. ಈಗಲೂ ಭಾರಿ ವಾಹನಗಳು ಇದೇ ಮಾರ್ಗಗಳ ಮೂಲಕ ಸಂಚರಿಸಬಹುದು.