ಬೆಂಗಳೂರು:''ಕರ್ನಾಟಕದಲ್ಲಿ ಯಾವುದೇ ರೀತಿಯ ದ್ವೇಷ ಹರಡದಂತೆ ಮತ್ತು ಅಂತಹ ಅನಪೇಕ್ಷಿತ ಘಟನೆಗಳ ಬಗ್ಗೆ ಕಣ್ಗಾವಲಿರಿಸಲು 'ಶಾಂತಿಯುತ ಕರ್ನಾಟಕ' ಎಂಬ ಹೊಸ ಸಹಾಯವಾಣಿ ಸ್ಥಾಪಿಸುವಂತೆ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಹಾಗು ಡಿ.ಕೆ.ಶಿವಕುಮಾರ್ ಅವರಿಗೆ ವಿಶೇಷ ಮನವಿ ಮಾಡಿದ್ದಾರೆ. ನಮ್ಮ ಗುರಿ ಅಭಿವೃದ್ಧಿ ಮತ್ತು ಪ್ರಗತಿ ಹಾಗೂ "ಬ್ರ್ಯಾಂಡ್ ಕರ್ನಾಟಕ" ರಕ್ಷಿಸುವುದು ಎಂದು ಇದೇ ವೇಳೆ ತಿಳಿಸಿದ್ದಾರೆ.
ಇನ್ನೊಂದೆಡೆ, ಚಕ್ರವರ್ತಿ ಸೂಲಿಬೆಲೆ ಅವರನ್ನು ಜೈಲಿಗೆ ಹಾಕುತ್ತೇವೆ ಎಂಬ ಎಂ.ಬಿ.ಪಾಟೀಲ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ, ಜೈಲಿಗೆ ಹಾಕುವುದಾಗಿ ಅಹಂಕಾರದಿಂದ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಚಕ್ರವರ್ತಿ ಸೂಲಿಬೆಲೆ ಮೈಸೂರಿನಲ್ಲಿ ಸಾವರ್ಕರ್ ಕುರಿತು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಅದಕ್ಕೆ ಅನುಮತಿ ಕೊಡಬಾರದು ಎಂದು ಕಾಂಗ್ರೆಸ್ ಸಚಿವರು ಪ್ರಯತ್ನ ಮಾಡಿದರು. ಚಕ್ರವರ್ತಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ. ಇದು ಹಿಟ್ಲರ್ ಸರ್ಕಾರ ಎಂದು ಅವರು ಟೀಕಿಸಿದರು. ಸಚಿವರ ಹೇಳಿಕೆಯನ್ನು ಖಂಡಿಸುತ್ತೇವೆ. ಕಾರ್ಯಕ್ರಮಗಳನ್ನು ಮೊಟಕುಗೊಳಿಸುವ ಕೆಲಸ ನಡೆದರೆ, ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ:''ಗೃಹ ಲಕ್ಷ್ಮೀ ಯೋಜನೆಗೆ ಹಣಕಾಸು ಕ್ರೋಡೀಕರಣ ಸಂಬಂಧ ಹಣಕಾಸು ಇಲಾಖೆ ಪರಿಶೀಲನೆ ಮಾಡುತ್ತಿದೆ. ಆಗಸ್ಟ್ 15ಕ್ಕೆ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸುತ್ತೇವೆ'' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.