ಬೆಂಗಳೂರು :ಕೊರೊನಾ ಬಂದ ಮೇಲೆ ಜೀವನಶೈಲಿ ಎಷ್ಟು ಬದಲಾಗಿ ಬಿಟ್ಟಿದೆ ಅಂದರೆ ಜನರು ಎಷ್ಟು ಸಕ್ರಿಯವಾಗಿ ಇದ್ರೋ ಅಷ್ಟೇ ನಿಷ್ಕ್ರಿಯ ಆಗಿದ್ದಾರೆ. ಕೊರೊನಾ ಭೀತಿಗೆ ಹೊರಗೆ ಹೋಗದೆ ಮನೆಯ ನಾಲ್ಕು ಗೋಡೆಯೇ ಪ್ರಪಂಚವಾಗಿ ಯಾವುದೇ ದೈಹಿಕ ಚಟುವಟಿಕೆ ಇಲ್ಲದಂತಾಗಿದೆ.
ಅನಿಯಮಿತ ಆಹಾರ ಪದ್ಧತಿ, ವ್ಯಾಯಾಮ ಮಾಡದೇ ಇಡೀ ಈ ಎರಡು ವರ್ಷದ ಎಫೆಕ್ಟ್ ಈಗ ಗೋಚರಿಸುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಶೇ.30ರಷ್ಟು ಪಿಸಿಒಎಸ್ ಪ್ರಕರಣ ಹೆಚ್ಚಾಗಿವೆ.
ಈ ಬಗ್ಗೆ ರಾಧಾಕೃಷ್ಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾಗಿರುವ ಡಾ. ವಿದ್ಯಾ ಭಟ್ ಇಂದು ವರ್ಚುವಲ್ನಲ್ಲಿ ಮಾತನಾಡಿದರು. ಶೇ.85ರಷ್ಟು ಅಂಡೋತ್ಪತ್ತಿ ಅಸ್ವಸ್ಥತೆ ಕಾರಣದಿಂದಾಗಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎನ್ನುವುದು ಮಹಿಳೆಯರಲ್ಲಿ ಬಂಜೆತನಕ್ಕೆ ಪ್ರಮುಖ ಕಾರಣವಾಗಿದೆ. ಆದರೂ, ಪಿಸಿಒಎಸ್‍ನಿಂದ ಬಳಲುತ್ತಿರುವ ಶೇ.60ರಷ್ಟು ಮಹಿಳೆಯರು ಯಾವುದೇ ವೈದ್ಯಕೀಯ ನೆರವಿಲ್ಲದೆ ಗರ್ಭಿಣಿಯರಾಗುತ್ತಾರೆ ಎಂದು ತಿಳಿಸಿದರು.
2020ರಲ್ಲಿ ಭಾರತದಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, 20-29 ವಯಸ್ಸಿನ ಶೇ.16ರಷ್ಟು ಮಹಿಳೆಯರು ಪಿಸಿಒಎಸ್‍ನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೆಚ್ಚಿನ ಮಟ್ಟದ ಪುರುಷ ಲೈಂಗಿಕ ಹಾರ್ಮೋನುಗಳು (ಆಂಡ್ರೋಜೆನ್‍ಗಳು) ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟದಲ್ಲಿ ಉಂಟಾಗುವ ಅನಿಶ್ಚಿತತೆಗಳಿಂದಾಗಿ ಮಹಿಳೆಯರ ಋತುಚಕ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.
ಕೆಲವೊಮ್ಮೆ ಇದು ಗರ್ಭಪಾತಕ್ಕೂ ಕಾರಣವಾಗಬಹುದು. ಇದನ್ನು ತಡೆಯಲು ನಿಯಮಿತವಾಗಿ ಮೊಟ್ಟೆಗಳ ಬಿಡುಗಡೆ ಅಥವಾ ಅದನ್ನು ಸಂಪೂರ್ಣ ತಡೆಯುವುದರಿಂದ ಮಾಡಬಹುದು. ಇದರಿಂದ ಪಿಸಿಒಎಸ್ ರೋಗಿಗಳಿಗೆ ಸವಾಲಾಗಿರುವುದನ್ನು ತಡೆದು ಸುಲಭವಾಗಿ ಗರ್ಭ ಧರಿಸಲು ಅನುಕೂಲ ಮಾಡಿಕೊಡುತ್ತದೆ ಎನ್ನುತ್ತಾರೆ.
ಪಿಸಿಒಸ್ ಇರುವ ಮಹಿಳೆಯರಲ್ಲಿ ಸ್ಥೂಲಕಾಯತೆಯೂ ಸಮಸ್ಯೆಯಾಗಿದೆ. ಶೇ.40 ರಿಂದ ಶೇ.80ರಷ್ಟು ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ. ಇದರೊಂದಿಗೆ ಹಾರ್ಮೋನ್ ವ್ಯತ್ಯಯ, ಒತ್ತಡ, ಜೀವನಶೈಲಿಯ ಬದಲಾವಣೆ, ಇನ್ಸುಲಿನ್ ಪ್ರತಿರೋಧ, ಮೆಟಬಾಲಿಕ್ (ಚಯಾಪಚಯ) ಸಮಸ್ಯೆಗೂ ಕಾರಣವಾಗುತ್ತವೆ.
ಪಿಸಿಒಎಸ್ ಕುರಿತ ಚಿಕಿತ್ಸೆಯು ಬಂಜೆತನ ಕಡಿಮೆಗೊಳಿಸುವಂತೆ ಅಂಡೋತ್ಪತ್ತಿಯ ಮೇಲ್ವಿಚಾರಣೆ, ಫಲವತ್ತತೆಯನ್ನು ಸುಧಾರಿಸುವುದಕ್ಕೆ ತಂತ್ರಜ್ಞಾನ ನೆರವಿನಿಂದ ಶಸ್ತ್ರಚಿಕಿತ್ಸೆ, ಔಷಧ ನೀಡಿಕೆ ಮತ್ತು ದೇಹದ ತೂಕ ನಿರ್ವಹಣೆ ಒಳಗೊಂಡಿದೆ.