ಬೆಂಗಳೂರು :ಕೊರೊನಾ ವೈರಾಣು ಸೋಂಕು ಹರಡುವ ಭೀತಿ ಹೆಚ್ಚುತ್ತಿರುವ ನಡುವೆಯೂ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದರು. ನಗರದ ನೈರ್ಮಲ್ಯ ಕಾಪಾಡಿಕೊಳ್ಳುವುದಕ್ಕೋಸ್ಕರ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು.
ನಾವಿರುವುದೇ ನಿಮ್ಮ ಸೇವೆ ಮಾಡಲು ಎಂದು ತಮ್ಮ ಆರೋಗ್ಯ ಲೆಕ್ಕಿಸದೆ ಮನೆಗಳ, ನಗರದ ತ್ಯಾಜ್ಯ, ಕೋವಿಡ್ ತ್ಯಾಜ್ಯ ವಿಲೇವಾರಿ ಮಾಡಿದ್ದ ಪೌರ ಕಾರ್ಮಿಕರಿಗೆ ವೇತನದಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ.
ಇದನ್ನೂ ಓದಿ...ಆರೋಗ್ಯ ಸೇತು ಆ್ಯಪ್ನಲ್ಲಿ ಬಳಕೆದಾರರ ಮಾಹಿತಿ ಹಂಚಿಕೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ
ಕೊರೊನಾದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಇಳಿದಿದೆ. ಸ್ಥಳೀಯ ಸಂಸ್ಥೆಗಳ ಪರಿಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. ಎಷ್ಟೋ ಕಡೆ ಪೌರಕಾರ್ಮಿಕರು ವೇತನ ಆಗುತ್ತಿಲ್ಲ ಎಂದು ಪ್ರತಿಭಟನೆಗಳನ್ನೂ ನಡೆಸಿದ್ದಾರೆ.
ಆದರೆ, ಬೆಳಗಾವಿ ಮತ್ತು ಮಂಗಳೂರು ಮಹಾನಗರ ಪಾಲಿಕೆಗಳಲ್ಲಿ ತೆರಿಗೆ ಸಂಗ್ರಹದ ಹಿನ್ನೆಡೆಯಾದ್ರೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದ ಪೌರ ಕಾರ್ಮಿಕರಿಗೆ ನಿಯಮಿತವಾಗಿ ವೇತನ ಪಾವತಿಸಲಾಗಿದೆ.
ಪೌರಕಾರ್ಮಿಕರಿಗೆ ವೇತನ ಪಾವತಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 1,256 ಪೌರ ಕಾರ್ಮಿಕರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ 234 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದ ಪೌರಕಾರ್ಮಿಕರು ಕೊರೊನಾ ಸಂದರ್ಭದಲ್ಲಿ ಕಂಟೋನ್ಮೆಂಟ್ ಝೋನ್, ಕ್ವಾರಂಟೈನ್, ಆಸ್ಪತ್ರೆ ಹಾಗೂ ಹೋಟೆಲ್‍ಗಳಲ್ಲಿ ಉತ್ಪತ್ತಿಯಾದ ಕೋವಿಡ್ ತ್ಯಾಜ್ಯ ವಿಲೇವಾರಿ ಮಾಡುವುದರ ಜತೆಗೆ ನಗರವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಕೊರೊನಾ ಹರಡದಂತೆ ಪ್ರಮುಖ ಪಾತ್ರ ವಹಿಸಿದ್ದರು.
ಆದರೆ, ಕೆಲವೆಡೆ ಸುರಕ್ಷತಾ ಪರಿಕರಿಗಳ ಕೊರತೆ ಎಂದು ದೂರುಗಳು ಬಂದಿದ್ದು ಬಿಟ್ಟರೆ, ವೇತನದ ವಿಳಂಬದ ದೂರುಗಳು ಬಂದಿಲ್ಲ. ಸಂಕಷ್ಟದಲ್ಲಿ ಕೈ ಹಿಡಿದ ಸರ್ಕಾರಕ್ಕೆ ಪೌರಕಾರ್ಮಿಕರು ಧನ್ಯವಾದ ಹೇಳಿದ್ದಾರೆ.