ಕರ್ನಾಟಕ

karnataka

ETV Bharat / state

ಪೇ ಕಾಂಗ್ರೆಸ್, ಪೇ ಸಿಎಂ, ಪೇ ಡಿಸಿಎಂ ಮೂಲಕ ಲೋಕಸಭೆ ಚುನಾವಣೆಗೆ ಫಂಡ್ ಕಲೆಕ್ಷನ್: ಆರ್‌.ಅಶೋಕ್ - ಪೇ ಡಿಸಿಎಂ

ಕಾಂಗ್ರೆಸ್​ ಸರ್ಕಾರದಲ್ಲಿ ದಿನನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಮಾಜಿ ಸಚಿವ ಆರ್.ಅಶೋಕ್​ ಟೀಕಿಸಿದರು.

ಮಾಜಿ ಸಚಿವ ಆರ್. ಅಶೋಕ್​
ಮಾಜಿ ಸಚಿವ ಆರ್. ಅಶೋಕ್​

By

Published : Aug 10, 2023, 5:00 PM IST

ಬೆಂಗಳೂರು : ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್‍ಗೆ ಇಳಿದಿರುವಂತಿದೆ. ನಮ್ಮ ಸರ್ಕಾರದ ವಿರುದ್ಧ ಪೇ ಸಿಎಂ ಆರೋಪ ಮಾಡಿದ್ದರು. ಆದರೆ, ಈಗ ಪೇ ಕಾಂಗ್ರೆಸ್, ಪೇ ಸಿಎಂ, ಪೇ ಡಿಸಿಎಂ ಆಗಿದೆಯೇ ಎಂದು ಆರ್.ಅಶೋಕ್ ಪ್ರಶ್ನಿಸಿದರು. ನಮ್ಮ ಸರ್ಕಾರದ ಅವಧಿಯ ಕಾಮಗಾರಿಗಳ ತನಿಖೆಗೆ ಮುಂದಾಗಿರುವ ನೀವೇನು ಸತ್ಯಹರಿಶ್ಚಂದ್ರರೇ?. 2013ರಿಂದ ತನಿಖೆ ನಡೆಸಿ ಎಂದು ಇದೇ ವೇಳೆ ಸವಾಲೆಸೆದರು.

ಪದ್ಮನಾಭನಗರದ ಶಾಸಕರ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರು, ಕಾಂಗ್ರೆಸ್ ಅಧಿಕಾರ ಪಡೆದರೆ ಎಟಿಎಂ ಸರ್ಕಾರದ ಮುನ್ಸೂಚನೆ ಕೊಟ್ಟಿದ್ದರು. ಅವರ ಮಾತು ನೂರಕ್ಕೆ ನೂರು ಸತ್ಯ ಎಂದು ಟೀಕಿಸಿದರು. ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಪೇಸಿಎಂ ಎಂದು ಅಪಪ್ರಚಾರ ಮಾಡಿದ್ದರು. ಈಗ ಪೇ ಕಾಂಗ್ರೆಸ್, ಪೇ ಸಿಎಂ, ಪೇ ಡಿಸಿಎಂ ಆಗಿದೆಯೇ? ಎಂದು ಕೇಳಿದರು. ನೀವು ಕಳಪೆ ಕಾಮಗಾರಿ ಬಗ್ಗೆ ಮಾತನಾಡುತ್ತೀರಿ. ಡಿ.ಕೆ.ಶಿವಕುಮಾರ್ ಈ ಕುರಿತು ಮಾತನಾಡಿದ್ದಾರೆ. ಕಳಪೆ ಕಾಮಗಾರಿ ನಡೆದರೆ ಸರ್ಕಾರದ ಕಾನೂನು ಕಟ್ಟಳೆಗಳಿವೆ, ಮಾನದಂಡವೂ ಇದೆ, ಕಾರ್ಪೊರೇಷನ್‍ನಲ್ಲಿ ಸ್ಕ್ವಾಡ್ ಇದೆ ಎಂದರು.

ನಮ್ಮ ಮೇಲೆ 40 ಶೇಕಡಾ ಕುರಿತಂತೆ ನಿರಾಧಾರ ಆರೋಪ ಮಾಡಿದ್ದೀರಿ. ನಿಮ್ಮ ಮೇಲೆ ಶೇ. 15ರ ಆರೋಪ ಮಾಡಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು? ಎಂದರು. ಗುತ್ತಿಗೆದಾರರು ಅಜ್ಜಯ್ಯ ದೇವಸ್ಥಾನಕ್ಕೆ ಹೋಗಿ ಆಣೆ ಮಾಡುವಂತೆ ಕೇಳಿದ್ದಾರೆ. ನೀವು ಕಮಿಷನ್ ಕೇಳದೇ ಇದ್ದರೆ ಸವಾಲು ಒಪ್ಪಬೇಕಿತ್ತಲ್ಲವೇ? ಎಂದು ಹೇಳಿದರು.

ಫಂಡ್ ಕಲೆಕ್ಷನ್ ಎಂಬುದು ಲೋಕಸಭಾ ಚುನಾವಣೆಗೆ ಗುದ್ದಲಿ ಪೂಜೆಯೇ ಎಂದು ಪ್ರಶ್ನಿಸಿದ ಅಶೋಕ್‌, ಗುತ್ತಿಗೆದಾರರ ಸಮಸ್ಯೆ ವಿಚಾರ ಪ್ರಸ್ತಾಪಿಸುತ್ತಾ ಕೆಂಪಣ್ಣನವರೇ ಎಲ್ಲಿದ್ದೀರಪ್ಪಾ ಎಂದರು. ಬಿಬಿಎಂಪಿಯ 2019ರಿಂದ 2023ರ ಕಾಮಗಾರಿಗಳನ್ನು ಮಾತ್ರ ತನಿಖೆ ಮಾಡ್ತಾ ಇದ್ದೀರಿ. ನೀವು ಪ್ರಾಮಾಣಿಕರಿದ್ದರೆ 2013ರಿಂದ ತನಿಖೆ ಮಾಡಬಹುದಲ್ಲವೇ?. ಗುತ್ತಿಗೆದಾರರೆಲ್ಲರೂ ಕಳ್ಳರಾದರೆ, 50 ವರ್ಷ ರಾಜ್ಯವಾಳಿದ ಕಾಂಗ್ರೆಸ್ಸಿನ ಬಳುವಳಿ ಇವರೇ ಎಂಬ ಪ್ರಶ್ನೆಗಳನ್ನು ಮುಂದಿಟ್ಟರು.

ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದರೆ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಕಥೆ ಏನು?. ದಯಾಮರಣ ಕೋರಿ 300 ಜನ ಗುತ್ತಿಗೆದಾರರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ಸಿನವರೇ ಇದಕ್ಕೆ ನಿಮ್ಮ ಉತ್ತರ ಏನು?. ದೆಹಲಿಯಲ್ಲಿ ಸಚಿವರ ಸಭೆ ಮಾಡಿದ್ದು, ಲೋಕಸಭಾ ಸೀಟು ಗೆಲ್ಲಿಸಲೇ ಅಥವಾ ಸೂಟ್‍ಕೇಸ್ ತುಂಬಿಸಲೋ?. ಶಿವಕುಮಾರ್ ಅವರೇ ನಿಮ್ಮದು ಬ್ರ್ಯಾಂಡ್ ಬೆಂಗಳೂರೇ ಅಥವಾ ಬ್ಲ್ಯಾಕ್ ಬೆಂಗಳೂರೇ?. ಸಿಎಂ ಹಣ ಬಿಡುಗಡೆ ಮಾಡಿದರೆ ಡಿಸಿಎಂ ತಡೆ ಹಿಡೀತಾರೆ. ವೇಣುಗೋಪಾಲರವರು ಹಣ ಬಿಡುಗಡೆಗೆ ಮತ್ತು ಸುರ್ಜೇವಾಲಾರವರು ಹಣ ತಡೆಹಿಡಿಯಲು ಸೂಚಿಸಿದ್ದರೇ? ಎಂದು ಕೇಳಿದರು.

ಈ ಗುತ್ತಿಗೆದಾರರೆಲ್ಲರೂ ಬಿಜೆಪಿಯ ಮೂರು ವರ್ಷಗಳ ಆಡಳಿತದ ವೇಳೆ ಆಕಾಶದಿಂದ ಇಳಿದಿದ್ದಾರಾ?. ಒಬ್ಬರು 29 ವರ್ಷದಿಂದ ಗುತ್ತಿಗೆದಾರರಾಗಿದ್ದವರು ಇಲ್ಲಿದ್ದಾರೆ. 29 ವರ್ಷದಿಂದ ಯಾರು ಆಡಳಿತ ಮಾಡಿದ್ದರು?. ಕಾಂಗ್ರೆಸ್ ಪಕ್ಷದ ಆಡಳಿತ ಇತ್ತಲ್ಲವೇ?. ಇಲ್ಲಿ ಹಲವು ದಶಕಗಳಿಂದ ಇದ್ದ ಅಧಿಕಾರಿಗಳಿದ್ದಾರೆ. ಅವರಿಗೆಲ್ಲ ತರಬೇತಿ ನೀಡಿದವರು ನೀವೇ ತಾನೇ?. ನಿಮ್ಮ ಯೂನಿವರ್ಸಿಟಿಯಲ್ಲಿ ಈ ಕಂಟ್ರಾಕ್ಟರ್​ಗಳು, ಇಂಜಿನಿಯರ್​ಗಳು ಓದಿದ್ದಾರೆ. ಅಲ್ಲೇ ಪದವಿ, ಪಿ.ಎಚ್.ಡಿ. ಪಡೆದವರು. ಎಲ್ಲ ನಿಮ್ಮ ಯೂನಿವರ್ಸಿಟಿಯಲ್ಲೇ ಇರುವಾಗ, ಈಗ ಕಳಪೆ ಎಂದರೆ ಹೇಗೆ? ಎಂದು ಅಶೋಕ್ ಅವರು ಕೇಳಿದರು.

ಎಲ್ಲ ಅಧಿಕಾರಿಗಳು, ಗುತ್ತಿಗೆದಾರರು ನಿಮ್ಮ ಲೆಕ್ಕದಲ್ಲಿ ಕಳ್ಳರು. ಹೊಸ ಸರ್ಕಾರ ಬಂದ ಮೇಲೆ ನೀವೆಲ್ಲ ಸತ್ಯ ಹರಿಶ್ಚಂದ್ರರಾ?. ಇಂಜಿನಿಯರ್, ವೈದ್ಯರು ಸೇರಿ ಎಲ್ಲ ವೃತ್ತಿಯಲ್ಲೂ ಸಣ್ಣ ಪ್ರಮಾಣದ ಕಳ್ಳರಿರುತ್ತಾರೆ. ಶೇ. 5 ರಿಂದ 10 ಜನ ಇದ್ದಾರು. ಅವರನ್ನು ನೋಡಿ ತನಿಖೆಗೆ ಒಳಪಡಿಸಿ. ಎಲ್ಲ ಕಂಟ್ರಾಕ್ಟರ್​ಗಳ ವಿರುದ್ಧ ಕಳ್ಳರೆಂಬ ಪದ ಬಳಕೆ ಎಷ್ಟು ಸರಿ ಎಂದರು. ಇವರೆಲ್ಲ ಕಳ್ಳರಾದರೆ ನೀವೇನು ದರೋಡೆಕೋರರೇ? ಎಂದು ಪ್ರಶ್ನಿಸಿದರು.

ಹೊಸ ಸರ್ಕಾರ ಬಂದಾಗ 6 ತಿಂಗಳು ವಿರೋಧ ಪಕ್ಷ, ಜನರು ಮಾತನಾಡುವುದಿಲ್ಲ. ಮಾಧ್ಯಮದವರು ಅವರ ತಂಟೆಗೆ ಹೋಗುವುದಿಲ್ಲ. ಇಲ್ಲಿ ಬಂದು ಎರಡೇ ತಿಂಗಳಿಗೆ ಹಗರಣಗಳೇ (ಸ್ಕ್ಯಾಂಡಲ್) ಹೆಚ್ಚುತ್ತಿದೆ. ದಿನನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಟೀಕಿಸಿದರು. ಹಲವು ಸಚಿವರ ವಿರುದ್ಧ ಕಮಿಷನ್ ಆರೋಪ ಕೇಳಿ ಬಂದಿದೆ ಎಂದು ಅಶೋಕ್ ಅವರು ಆಕ್ಷೇಪಿಸಿದರು. ನೀವೇನು ಸತ್ಯಹರಿಶ್ಚಂದ್ರರೇ? 2013ರಿಂದ ತನಿಖೆ ನಡೆಸಿ ಎಂದು ಸವಾಲೆಸೆದರು.

ಭ್ರಷ್ಟಾಚಾರ ಕೇಸಿನಲ್ಲಿ ಜಾಮೀನಿನಲ್ಲಿ ಇರುವವರು ನೀವಲ್ಲವೇ?. ನೀವು ಸತ್ಯ ಹರಿಶ್ಚಂದ್ರನಂತೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ. ಎರಡು ತಿಂಗಳಿಂದ ನಿವೇಶನದ ಒಂದು ಪ್ಲಾನ್‍ಗೆ ಕೂಡ ಒಪ್ಪಿಗೆ ಸಿಗುತ್ತಿಲ್ಲ. ನಿವೇಶನದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡದೆ ಇರುವುದರ ಗೂಡಾರ್ಥ ಏನು?. ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರಾ?. 26 ಕಂಡಿಷನ್ ಹಾಕಿದ್ದಾರೆ. ನನ್ನ ಪ್ರಕಾರ, ಇದಕ್ಕೆ 26 ವರ್ಷ ಬೇಕೇನೋ?. ದಾಖಲೆ ಪಡೆದು ಕೊಡಲು ಕನಿಷ್ಠ ನಾಲ್ಕೈದು ವರ್ಷ ಬೇಕಾದೀತು ಎಂದು ತಿಳಿಸಿದರು. ಕಳೆ ಕಿತ್ತ ಮಾಹಿತಿಯನ್ನೂ ಕೋರಿದ್ದಾರೆ ಎಂದು ಟೀಕಿಸಿದರು.

ಪಾಲಿಕೆಗಳಲ್ಲಿ ವರ್ಗಾವಣೆ ಮಾಡಬೇಕಾದರೆ, ನನ್ನ ಗಮನಕ್ಕೆ ತರದೆ ಮಾಡಬಾರದೆಂದು ಪತ್ರ ಬರೆದಿದ್ದಾರೆ. ನಾನು ಕೂಡ 4 ಸಾರಿ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ಯಾವತ್ತೂ ಕೂಡ ಇಂಥ ಒಂದು ಪತ್ರವನ್ನೂ ಬರೆದಿಲ್ಲ. ಬಿಲ್ ಎಲ್ಲವನ್ನೂ ಪಾವತಿಸದೆ ನಿಲ್ಲಿಸಲು ನಾನು ಯಾವತ್ತೂ ಹೇಳಿರಲಿಲ್ಲ ಎಂದು ಅವರು ತಿಳಿಸಿದರು.

ಬಾಕಿ ಇರುವ ಹಣ ಬಿಡುಗಡೆ ಮಾಡಿ :ಕೆಲಸ ಕಾರ್ಯ ಸ್ಥಗಿತವಾದರೆ, ಬ್ರ್ಯಾಂಡ್ ಬೆಂಗಳೂರು ಅನುಷ್ಠಾನ ಹೇಗೆ ಸಾಧ್ಯ?. ಲೋಡ್‍ಗಟ್ಟಲೆ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿದೆ. ಕಸ ತೆಗೆಯುವವರಿಲ್ಲ. ಕಾಮಗಾರಿ ನಡೆಸುವವರಿಲ್ಲ. ಬ್ರ್ಯಾಂಡ್ ಬೆಂಗಳೂರು ಮಾಡಲು ಸಾಧ್ಯವೇ? ಎಂದರು. ಅರ್ಧದಲ್ಲಿ ನಿಂತ ಮೋರಿ, ರಸ್ತೆ ಮತ್ತಿತರ ಕಾಮಗಾರಿ ನಿಲ್ಲಬಾರದು ಎಂದ ಅವರು, ಕಂಟ್ರಾಕ್ಟರ್​ ನ್ಯಾಯಯುತವಾಗಿ ಬಾಕಿ ಇರುವ ಹಣ ಬಿಡುಗಡೆ ಮಾಡಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಇದನ್ನೂ ಓದಿ:ಗುತ್ತಿಗೆದಾರರನ್ನು ಮಾಧ್ಯಮದವರೆದುರು ಯಾರು ಕಳಿಸುತ್ತಿದ್ದಾರೆ ಅಂತ ಗೊತ್ತಿದೆ : ಡಿಕೆಶಿ

ABOUT THE AUTHOR

...view details