ಬೆಂಗಳೂರು:ಮಧ್ಯಪ್ರದೇಶದ ರೇವಾದಲ್ಲಿ ನಿರ್ಮಾಣಗೊಂಡಿರುವ 750 ಮೆಗಾ ವ್ಯಾಟ್ ಸೋಲಾರ್ ಸ್ಥಾವರ ಏಷ್ಯಾದ ಅತಿ ದೊಡ್ಡ ಘಟಕ ಎಂದು ಹೇಳಲಾಗ್ತಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಉದ್ಘಾಟನೆಗೊಂಡಿರುವ 750 ಮೆಗಾ ವ್ಯಾಟ್ ಸೋಲಾರ ಸ್ಥಾವರ ಏಷ್ಯಾದ ಅತಿ ದೊಡ್ಡ ಘಟಕ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಹಾಗಿದ್ದರೆ ಕರ್ನಾಟಕದ ಪಾವಗಡದಲ್ಲಿರುವ 2000 ಮೆಗಾ ವ್ಯಾಟ್ ಸೋಲಾರ್ ಸ್ಥಾವರ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಮೂರು ವರ್ಷದೊಳಗೆ ಪಾವಗಡದಲ್ಲಿ ಸೋಲಾರ್ ಸ್ಥಾವರವನ್ನು ಸ್ಥಾಪಿಸಿತ್ತು. 2018ರಿಂದ ಕಾರ್ಯನಿರ್ವಹಿಸುತ್ತಿರುವ ಈ ಮೆಗಾ ಸೋಲಾರ್ ಸ್ಥಾವರಕ್ಕಾಗಿ ಒಂದೇ ಒಂದು ಎಕರೆ ಜಮೀನನ್ನು ರೈತರಿಂದ ಸ್ವಾಧೀನ ಪಡಿಸಿಕೊಂಡಿಲ್ಲ. ಎಲ್ಲ 13,000 ಎಕರೆ ಜಮೀನನ್ನು ರೈತರಿಂದ ಗುತ್ತಿಗೆ ಪಡೆಯಲಾಗಿದ್ದು, ವಾರ್ಷಿಕ ಬಾಡಿಗೆಯನ್ನು ಅವರಿಗೆ ನೀಡಲಾಗುತ್ತಿದೆ. ಕರ್ನಾಟಕ ಮಾಡೆಲ್ನ ನವೀಕರಿಸಬಹುದಾದ ಇಂಧನ ಭಾರತದಲ್ಲಿ ಅತ್ಯುತ್ತಮವಾದದ್ದು ಎಂದು ವಿವರಿಸಿದ್ದಾರೆ.
2000 ಮೆಗಾ ವ್ಯಾಟ್ ಪಾವಗಡ ಸೋಲಾರ್ ಪಾರ್ಕ್ ಈಗಾಗಲೇ ಕಾರ್ಯನಿರ್ವಹಿಸುತ್ತಿರುವಾಗ ಮಧ್ಯ ಪ್ರದೇಶದಲ್ಲಿ ಉದ್ಘಾಟನೆಗೊಂಡ 750 ಮೆಗಾ ವ್ಯಾಟ್ ಸೋಲಾರ್ ಸ್ಥಾವರವನ್ನು ಏಷ್ಯಾದ ಅತಿ ದೊಡ್ಡ ಸ್ಥಾವರವೆಂದು ಕೇಂದ್ರ ಸರ್ಕಾರ ಹೇಗೆ ಹೇಳಲು ಸಾಧ್ಯ ಎಂಬುದಕ್ಕೆ ಕೇಂದ್ರ ಇಂಧನ ಸಚಿವರು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.