ಕರ್ನಾಟಕ

karnataka

ETV Bharat / state

ಪಾವಗಡ ಬಸ್ ದುರಂತ.. ಈ ಮಾರ್ಗದಲ್ಲಿ ಖಾಸಗಿ ಬಸ್ ಪರವಾನಿಗೆ ರದ್ದು, 4 ಅಧಿಕಾರಿಗಳು ಸಸ್ಪೆಂಡ್: ಸಚಿವ ಶ್ರೀರಾಮುಲು - ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿಕೆ

ಮೃತರ ಕುಟುಂಬಗಳಿಗೆ 5 ಲಕ್ಷ ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ 1 ಲಕ್ಷ ಪರಿಹಾರ ಕೊಡಲಾಗಿದೆ. ಗಾಯಾಳುಗಳಿಗೆ 50 ಸಾವಿರ ಪರಿಹಾರ ಕೊಡಲಾಗಿದೆ. ಆ ಮಾರ್ಗದಲ್ಲಿ ಖಾಸಗಿ ಬಸ್ ಪರವಾನಿಗೆ ರದ್ದುಪಡಿಸಿ, ಸರ್ಕಾರಿ ಬಸ್ ಓಡಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವರು ಭರವಸೆ ನೀಡಿದರು..

ಸಾರಿಗೆ ಸಚಿವ ಬಿ ಶ್ರೀರಾಮುಲು
ಸಾರಿಗೆ ಸಚಿವ ಬಿ ಶ್ರೀರಾಮುಲು

By

Published : Mar 21, 2022, 3:02 PM IST

Updated : Mar 21, 2022, 8:01 PM IST

ಬೆಂಗಳೂರು :ಪಾವಗಡ ಬಸ್ ದುರಂತ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆ ಮಾರ್ಗದಲ್ಲಿನ ಖಾಸಗಿ ಬಸ್‌ಗಳ ಪರವಾನಿಗೆ ರದ್ದುಪಡಿಸಿ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಕ್ರಮಕೈಗೊಳ್ಳಲಾಗುತ್ತದೆ ಮತ್ತು ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಾಜೇಂದ್ರ ರಾಜಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುಮಕೂರು ಜಿಲ್ಲೆ ಪಾವಗಡ ಸಮೀಪ ನಡೆದ ಖಾಸಗಿ ಬಸ್ ದುರಂತದಲ್ಲಿ 6 ಮಂದಿ ಸಾವಿಗೀಡಾಗಿದ್ದು, 43 ಮಂದಿಗೆ ಗಾಯಗಳಾಗಿವೆ.

ಪಾವಗಡ, ತುಮಕೂರು,ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ನಾನು ತೆರಳುವ ಮುನ್ನವೇ ಅಧಿಕಾರಿಗಳನ್ನು ಕಳಿಸಿ ಪ್ರಾಥಮಿಕ ವರದಿ ಪಡೆದಿದ್ದೇನೆ.

ಕೇಂದ್ರ ಸಚಿವ ನಾರಾಯಣಸ್ವಾಮಿ, ಶಾಸಕರು ಬಂದು ಪರಿಶೀಲನೆ ಮಾಡಿದ್ದಾರೆ. ಪಾವಗಡ, ತುಮಕೂರು ರಸ್ತೆಯಲ್ಲಿ ಇದೇ ಸ್ಥಳದಲ್ಲಿ ಅಪಘಾತವಾಗಿ ಎರಡು ಬಸ್ ಸೀಜ್ ಆಗಿ ಪೊಲೀಸ್ ಠಾಣೆಯಲ್ಲಿವೆ. ಹಾಗಾಗಿ, ಈ ಬಸ್ ಮೇಲೆ ಒತ್ತಡ ಆಗಿದೆ. ಓವರ್ ಲೋಡ್ ಆಗಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಫಿಟ್ನೆಸ್ ಸರ್ಟಿಫಿಕೇಟ್, ಪರ್ಮಿಟ್ ಎಲ್ಲ ನೋಡಿ ಪರಿಶೀಲನೆ ಮಾಡಲಾಗಿದೆ. ಕರ್ತವ್ಯ ಲೋಪದ ಆರೋಪದ ಮೇಲೆ ಆರ್‌ಟಿಒ ಅಮಾನತು ಮಾಡಿದ್ದೇನೆ ಎಂದರು.

ಈಗಾಗಲೇ ಅಲ್ಲಿ ಖಾಸಗಿ ಬಸ್ ಇವೆ, ಅದರ ಬದಲು 14 ಬಸ್‌ಗಳನ್ನು ನಮ್ಮ ನಿಗಮಗಳಿಂದ ಕೊಟ್ಟು 40 ಹೆಚ್ಚುವರಿ ಹಳ್ಳಿಗಳಿಗೆ 40-50 ಟ್ರಿಪ್‌ಗೆ ವ್ಯವಸ್ಥೆ ಮಾಡಲಾಗಿದೆ. ಮೃತರ ಕುಟುಂಬಗಳಿಗೆ 5 ಲಕ್ಷ ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ 1 ಲಕ್ಷ ಪರಿಹಾರ ಕೊಡಲಾಗಿದೆ. ಗಾಯಾಳುಗಳಿಗೆ 50 ಸಾವಿರ ಪರಿಹಾರ ಕೊಡಲಾಗಿದೆ. ಆ ಮಾರ್ಗದಲ್ಲಿ ಖಾಸಗಿ ಬಸ್ ಪರವಾನಿಗೆ ರದ್ದುಪಡಿಸಿ, ಸರ್ಕಾರಿ ಬಸ್ ಓಡಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.'

ಸದನದಲ್ಲಿ ಪಾವಗಡ ಬಸ್ ದುರಂತದ ಬಗ್ಗೆ ಚರ್ಚೆ

ಅಧಿಕಾರಿಗಳು ಸಸ್ಪೆಂಡ್:

ಇನ್ನು ಖಾಸಗಿ ಬಸ್‍ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ನಾಲ್ವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವಿಧಾನಸಭೆಯಲ್ಲಿ ತಿಳಿಸಿದರು.

ಶೂನ್ಯವೇಳೆಯಲ್ಲಿ ಪ್ರತಿ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಎಸ್‍ವಿಟಿ ಸಂಸ್ಥೆಗೆ ಸೇರಿದ ಈ ಬಸ್‍ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಪ್ರಯಾಣಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿರುವುದರಿಂದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ದೂರವಾಣಿ ಮೂಲಕ ಸಂಪರ್ಕಿಸಿ ತಕ್ಷಣವೇ ಸ್ಥಳಕ್ಕೆ ಹೋಗಬೇಕು ಎಂದು ಸೂಚನೆ ಕೊಟ್ಟರು. ಅದರಂತೆ ನಾನು ಘಟನಾ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಪಾವಗಡ, ತುಮಕೂರು ಮತ್ತು ಬೆಂಗಳೂರು ಆಸ್ಪತ್ರೆ ಕಳುಹಿಸಿ ಕೊಡಲಾಯಿತು. ಘಟನೆಯಲ್ಲಿ ಮೃತಪಟ್ಟವರಿಗೆ ಇಲಾಖೆಯಿಂದ 5 ಲಕ್ಷ ರೂ ಪರಿಹಾರ ಹಾಗೂ ವೈಯಕ್ತಿಕವಾಗಿ ನಾನು ಒಂದು ಲಕ್ಷ ರೂ ನೀಡಿರುವುದಾಗಿ ಸದನಕ್ಕೆ ತಿಳಿಸಿದರು.

ಮೇಲ್ನೋಟಕ್ಕೆ ಚಾಲಕನ ನಿರ್ಲಕ್ಷ್ಯ ಕಂಡುಬಂದಿದ. ಬಸ್‍ಗಳ ಪಿಟ್‍ನೆಸ್‍ ಇಲ್ಲದೆ, ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈ ವೇಳೆ ಮಾಜಿ ಸ್ಪೀಕರ್ ರಮೇಶ್‍ ಕುಮಾರ್ ಮಾತನಾಡಿ, ರಸ್ತೆಗಳ ರಾಷ್ಟ್ರೀಕರಣದ ನಂತರ ಉಂಟಾಗಿರುವ ಗೊಂದಲದಿಂದಾಗಿ ತುಮಕೂರು ಜಿಲ್ಲೆ ಪಾವಗಡದಲ್ಲಿ ಸಂಭವಿಸಿದಂತಹ ದುರಂತಗಳು ಪದೇ ಪದೇ ರಾಜ್ಯದಲ್ಲಿ ಮರುಕಳಿಸುತ್ತಿವೆ. ಸರ್ಕಾರ ಇನ್ನಾದರೂ ಇದಕ್ಕೆ ಸೂಕ್ತ ಮಾರ್ಗೋಪಾಯ ಕಂಡು ಹಿಡಿಯದಿದ್ದರೆ ಖಜಾನೆಯಲ್ಲಿರುವ ಹಣವೆಲ್ಲ ಪರಿಹಾರ ಕೊಟ್ಟೇ ಖರ್ಚಾಗುತ್ತದೆ ಎಂದರು.

ಮಾಜಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಗಾಲಿಗಳನ್ನು ಸರಿಯಾಗಿ ಹೊಂದಿಸಿಕೊಳ್ಳದೇ (ವ್ಹೀಲ್ ಅಲೈನ್‍ಮೆಂಟ್) ಖಾಸಗಿ ಬಸ್‍ಗಳಲ್ಲಿ ಇಂತಹ ದುರಂತಗಳು ಆಗಾಗ ಸಂಭವಿಸುತ್ತಿರುತ್ತವೆ ಎಂದರು.

ನಂತರ ಪ್ರತಿಕ್ರಿಯಿಸಿದ ಸಚಿವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ಬಸ್‍ಗಳಲ್ಲಿ ಟಾಪ್ ಪ್ರಯಾಣಕ್ಕೆ ಪೂರ್ಣ ಕಡಿವಾಣ ಹಾಕುವುದೂ ಸೇರಿದಂತೆ ಸದಸ್ಯರು ಹೇಳಿದ ಸಲಹೆಗಳನ್ನು ಅಳವಡಿಸಿಕೊಂಡು ಘಟನೆಯ ಬಗ್ಗೆ ಉನ್ನತ ತನಿಖೆ ನಡೆಸಲಾಗುವುದು. ಅಲ್ಲದೇ ದುರಂತಕ್ಕೀಡಾದ ಖಾಸಗಿ ಬಸ್‍ನ ಟಾಪ್ ಮೇಲೆ ಪ್ರಯಾಣಿಸಲು ಅವಕಾಶ ನೀಡಿದ ಮತ್ತು ಅಕ್ರಮವೆಸಗಿ ಬಸ್‍ಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Last Updated : Mar 21, 2022, 8:01 PM IST

ABOUT THE AUTHOR

...view details