ಬೆಂಗಳೂರು:ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಸಾವನ್ನಪ್ಪಿರುವ ಪ್ರಕರಣ ಇದೀಗ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದು, ಇದೇ ವಿಚಾರವನ್ನಿಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ಪ್ರತಿಪಕ್ಷದ ನಾಯಕರು ಹರಿಹಾಯ್ತಿದ್ದಾರೆ. ಇದರ ಬೆನ್ನಲ್ಲೇ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದು, ಪ್ರಕರಣದ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಸಂಭವಿಸಿದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಘಟನೆಯ ಬಗ್ಗೆ ಸೂಕ್ತ ಇಲಾಖಾ ತನಿಖೆ ನಡೆಸಿ ಆಡಳಿತಾತ್ಮಕ ಹಾಗೂ ತಾಂತ್ರಿಕ ಲೋಪದೋಷಗಳ ಬಗ್ಗೆ ವರದಿ ನೀಡಲು ಬಿಎಂಸಿಆರ್ ಐ ಸಂಸ್ಥೆಯ ಡಾ.ಸ್ಮಿತಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ತನಿಖಾ ವರದಿ ಕೈಸೇರಿದ ಕೂಡಲೇ ಕರ್ತವ್ಯ ಲೋಪವೆಸಗಿ ಅಮಾಯಕ ರೋಗಿಗಳ ಸಾವಿಗೆ ಕಾರಣರಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ವಿಮ್ಸ್ ತೀವ್ರ ನಿಗಾ ಘಟಕದಲ್ಲಿದ್ದಇಬ್ಬರು ಸಾವು: ಘಟನೆ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?
ನಿನ್ನೆ ಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಎರಡರಿಂದ ಮೂರು ತಾಸುಗಳ ಕಾಲ ಕರೆಂಟ್ ಕಟ್ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿದ್ದ ಇಬ್ಬರು ರೋಗಿಗಳು ಸಾವನ್ನಪ್ಪಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮಾತನಾಡಿದ್ದ ವಿಮ್ಸ್ ನಿರ್ದೇಶಕರು, ಆಸ್ಪತ್ರೆಯಲ್ಲಿ ಆಗಿರುವ ಸಾವುಗಳು ವಿವಿಧ ತೀವ್ರತರದ ಆರೋಗ್ಯ ಸಮಸ್ಯೆಗಳಿಂದ ಸಂಭವಿಸಿವೆ. ಒಬ್ಬ ರೋಗಿಯು ವಿಷಪೂರಿತ ಹಾವಿನ ಕಡಿತದಿಂದ ದೇಹದಲ್ಲಿ ಆಂತರಿಕ ರಕ್ತಸ್ರಾವವಾಗಿ ಸಾವಿಗೀಡಾಗಿದ್ದರೆ, ಇನ್ನೊಬ್ಬರು ಬಹು ಅಂಗಾಗ ವೈಫಲ್ಯದಿಂದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಕೊನೆಗೆ ಅವರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಸ್ಪಷ್ಟನೆ ನೀಡಿದ್ದರು. ವಿಮ್ಸ್ ಆಸ್ಪತ್ರೆಯು ಉನ್ನತ ಚಿಕಿತ್ಸಾ ಕೇಂದ್ರವಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಕೊನೆಗೆ ಪರಿಸ್ಥಿತಿ ಉಲ್ಬಣಗೊಂಡ ಬಳಿಕ ವಿಮ್ಸ್ಗೆ ದಾಖಲಾಗುವುದರಿಂದ ಸಾವು ಸಂಭವನೀಯತೆ ಹೆಚ್ಚಾಗುತ್ತದೆ. ಘಟನೆ ನಡೆದ ಸಮಯದಲ್ಲೇ ವಿದ್ಯುತ್ ಸಂಪರ್ಕ ಕೈಕೊಟ್ಟಿರುವುದು ಕಾಕತಾಳೀಯವಾಗಿದೆ ಎಂದಿದ್ದರು.
ಸರ್ಕಾರವೇ ಮಾಡಿದ ಕೊಲೆ ಎಂದ ಕಾಂಗ್ರೆಸ್:ವಿಮ್ಸ್ನಲ್ಲಿ ರೋಗಿಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಅಭಾವದಿಂದ ವೆಂಟಿಲೇಟರ್‌ನಲ್ಲಿದ್ದ ರೋಗಿಗಳ ಸಾವು ಬಿಜೆಪಿ ಸರ್ಕಾರ ಮಾಡಿದ ಕೊಲೆ. ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆಯೂ ಇರಲಿಲ್ಲವೇ? ಸುಧಾಕರ್ ಎಂಬ ಅಸಮರ್ಥ ಸಚಿವರ ಕೈಯ್ಯಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆ ಅನಾರೋಗ್ಯ ಪೀಡಿತವಾಗಿರುವುದು ಕೋವಿಡ್ ಕಾಲದಿಂದಲೂ ಸಾಬೀತಾಗುತ್ತಿದೆ ಎಂಬ ಆಕ್ರೋಶ ವ್ಯಕ್ತಪಡಿಸಿದೆ.