ಕರ್ನಾಟಕ

karnataka

ETV Bharat / state

ಜನರ ಪ್ರಾಣ ಬಲಿ ಪಡೆಯುತ್ತಿರುವ ಬೆಂಗಳೂರಿನ ರಸ್ತೆ ಗುಂಡಿಗಳು... ವರ್ಷದಲ್ಲೇ 10 ಜನ ಸಾವು - ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರಿನ ರಸ್ತೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ 1800ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಸ್ತೆ ಗುಂಡಿಗಳಿಂದ ಒಂದು ವರ್ಷದ ಅವಧಿಯಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ರಸ್ತೆ ಗುಂಡಿ
ರಸ್ತೆ ಗುಂಡಿ

By

Published : Oct 18, 2022, 9:05 PM IST

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ರಸ್ತೆ ಗುಂಡಿಗಳ ರಾಜಧಾನಿಯಾಗುತ್ತಿದೆಯಾ? ಎನ್ನುವ ಅನುಮಾನ ಮೂಡುತ್ತಿದೆ. ಅತಿಯಾದ ಮಳೆ ಹಾಗೂ ಪಾಲಿಕೆಯ ಅಸಮರ್ಪಕ ರಸ್ತೆ ನಿರ್ವಹಣೆ ಕಾರಣದಿಂದಾಗಿ ರಾಜಧಾನಿ ರಸ್ತೆಗಳೆಲ್ಲ ಗುಂಡಿಮಯವಾಗಿದ್ದು, ಹೈಕೋರ್ಟ್ ಪದೇ ಪದೆ ಚಾಟಿ ಬೀಸಿದ್ದರೂ ಯಾವುದೇ ಉಪಯೋಗ ಆಗಿಲ್ಲ. ಕಳೆದ ಹತ್ತು ತಿಂಗಳಿನಲ್ಲಿ 20 ಸಾವಿರ ರಸ್ತೆ ಗುಂಡಿ ಮುಚ್ಚಿದ್ದರೂ ನಗರ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ. ನಗರದ ರಸ್ತೆ ಗುಂಡಿಗಳು ಒಂದು ವರ್ಷದ ಅವಧಿಯಲ್ಲೇ 10 ಜನರನ್ನು ಬಲಿ ಪಡೆದುಕೊಂಡಿದೆ.

ಪ್ರತಿಬಾರಿ ರಸ್ತೆ ಗುಂಡಿಯಿಂದ ಅನಾಹುತಗಳು ಸಂಭವಿಸಿದಾಗ ಎಚ್ಚೆತ್ತುಕೊಳ್ಳುವ ಬಿಬಿಎಂಪಿ ತರಾತುರಿಯಲ್ಲಿ ಕೆಲ ರಸ್ತೆ ಗುಂಡಿಗೆ ಡಾಂಬಾರು ಹಾಕಿ ಕೈತೊಳೆದುಕೊಳ್ಳುವ ಪರಿಪಾಠ ನಡೆಸಿಕೊಂಡು ಬರುತ್ತಿದೆ. ಅದೇ ರೀತಿ ಎರಡು ದಿನಗಳ ಹಿಂದೆ ಸುಜಾತ ಚಿತ್ರಮಂದಿರದ ಸಮೀಪ ರಸ್ತೆಗುಂಡಿ ತಪ್ಪಿಸಲು ಹೋಗಿ ಸ್ಕೂಟಿಯಿಂದ ಆಯತಪ್ಪಿ ಬಿದ್ದ ಮಹಿಳೆ ಮೇಲೆ ಬಸ್ ಹರಿದು ಅವರು ಮೃತಪಟ್ಟ ನಂತರವೂ ಅಂತಹ ಚಿತ್ರಣ ಮತ್ತೊಮ್ಮೆ ಸೃಷ್ಟಿಯಾಗಿದೆ. ಪಾಲಿಕೆ ತನ್ನ ಹಳೆಯ ಚಾಳಿಯಂತೆ ರಾತ್ರೋರಾತ್ರಿ ಕೆಲ ಗುಂಡಿಗಳನ್ನು ಮುಚ್ಚಿ ಕೈ ತೊಳೆದುಕೊಂಡಿದೆ.

20 ಸಾವಿರ ರಸ್ತೆ ಗುಂಡಿ ಮುಚ್ಚಿದ ಬಿಬಿಎಂಪಿ:ಬೊಮ್ಮನಹಳ್ಳಿ ವಲಯದಲ್ಲಿ 1998, ದಾಸರಹಳ್ಳಿಯಲ್ಲಿ 2432, ಪೂರ್ವವಲಯದಲ್ಲಿ 7039, ಮಹದೇವಪುರದಲ್ಲಿ 2361, ಆರ್‌ಆರ್‌ ನಗರದಲ್ಲಿ 3972, ದಕ್ಷಿಣ ವಲಯದಲ್ಲಿ 2712, ಪಶ್ಚಿಮ ವಲಯದಲ್ಲಿ 3290, ಯಲಹಂಕ ವಲಯದಲ್ಲಿ 3369 ಸೇರಿ ಒಟ್ಟು ಎಂಟು ವಲಯಗಳಲ್ಲಿ 27,173 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 20 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಆದರೆ, ಅತಿಯಾದ ಮಳೆಯಿಂದಾಗಿ ಈ ಗುಂಡಿಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ. ಮುಚ್ಚಿರುವ ಗುಂಡಿಗಳಲ್ಲಿ ಮತ್ತೆ ಹಲವು ಬಾಯಿ ತೆರೆದಿದ್ದು, ಅತಿಯಾದ ಮಳೆಯಿಂದಾಗಿ ನಿರ್ವಹಣೆ ಇಲ್ಲದ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳ ಸಂಚಾರದಿಂದಾಗಿ ಗುಂಡಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ.

ವರ್ಷದ ರಸ್ತೆ ಗುಂಡಿ ಅವಾಂತರದ ಹಿನ್ನೋಟ: ಸೆಪ್ಟಂಬರ್ ತಿಂಗಳಲ್ಲಿ ನಗರದ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸರು 4545 ರಸ್ತೆಗುಂಡಿ ಗುರುತಿಸಿದ್ದು, ಅದರಲ್ಲಿ 1051 ಗುಡಿ ಮುಚ್ಚುವುದು ಬಾಕಿ ಉಳಿಸಿಕೊಂಡಿತ್ತು. ಕೂಡಲೇ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಸ್ತೆ ಗುಂಡಿ ಮುಚ್ಚಲು ಕ್ರಮ ವಹಿಸಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು.

ಬಿಬಿಎಂಪಿ ವ್ಯಾಪ್ತಿಯಲ್ಲಿ 2010 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಪರ ವಕೀಲರು ಹೈಕೋರ್ಟ್​ಗೆ ನೀಡಿದ್ದ ವರದಿಯಲ್ಲಿ ಮಾಹಿತಿ ನೀಡಿದ್ದು, ಪ್ರಮುಖ ರಸ್ತೆಗಳ 221 ರಸ್ತೆ ಗುಂಡಿ ಬಾಕಿ ಇದೆ ಎಂದು ವಿವರಗಳನ್ನು ಸೆಪ್ಟಂಬರ್ 19ಕ್ಕೆ ಹೈಕೋರ್ಟ್​ಗೆ ಸರ್ಕಾರ ನೀಡಿತ್ತು. ಅಲ್ಲದೆ 427 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ಟೆಂಡರ್ ಕರೆಯಲಾಗಿದೆ. 2023 ರೊಳಗೆ ಡಾಂಬರೀಕರಣ ಪೂರ್ಣಗೊಳಿಸಲಾಗುತ್ತದೆ. 2023ರ ಮಾರ್ಚ್ 31 ರ ಒಳಗೆ ಮಹಾನಗರದ 2500 ಕಿ.ಮೀ ಒಳರಸ್ತೆ ಡಾಂಬರೀಕರಣ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿತ್ತು. ಸರ್ಕಾರದ ಹೇಳಿಕೆ ದಾಖಲಿಸಿಕೊಂಡಿದ್ದ ಹೈಕೋರ್ಟ್, ಬೈಕ್ ಸವಾರರಿಗೆ ಅಪಾಯಕಾರಿಯಾಗದ ರೀತಿ ರಸ್ತೆಗುಂಡಿ ಮುಚ್ಚಲು ಬಿಬಿಎಂಪಿಗೆ ಸೂಚನೆ ನೀಡಿತ್ತು.

(ಓದಿ: ಬೆಂಗಳೂರಲ್ಲಿ ಮುಗಿಯದ ರಸ್ತೆ ಗುಂಡಿ ಸಮಸ್ಯೆ.. ಹೊಸದಾಗಿ 4545 ರಸ್ತೆ ಗುಂಡಿಗಳು ಪತ್ತೆ)

ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವರ್ಷದ ಮೇ ತಿಂಗಳಿನಿಂದ ಆಗಸ್ಟ್ ಅಂತ್ಯದವರೆಗೆ 20 ಸಾವಿರ ರಸ್ತೆಗುಂಡಿ ಮುಚ್ಚಿದ್ದೇವೆ. ಆದರೆ, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆ ಗುಂಡಿ ಹೆಚ್ಚಾಗುತ್ತಿದ್ದು, ಗುಂಡಿಗಳನ್ನು ಮುಚ್ಚಲು ತೊಂದರೆಯಾಗುತ್ತಿದೆ. ಮಳೆಯಲ್ಲಿ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಡಾಂಬರು ಎರಡೂ ಉಪಯೋಗಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ನಗರದಲ್ಲಿ ಮರಳು, ಕಲ್ಲು, ಜಲ್ಲಿಯಿಂದ ಮುಚ್ಚಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

ವರ್ಷದಲ್ಲೇ 656 ಮಂದಿ ಸಾವು:ಬೆಂಗಳೂರಿನ ರಸ್ತೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ 1800ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಶೇ 17 ರಷ್ಟು ಜನ ಕಳಪೆ ರಸ್ತೆ ಮತ್ತು ರಸ್ತೆ ಗುಂಡಿಗಳಿಂದ ನಡೆದ ಅಪಘಾತಗಳಿಂದ ಮೃತಪಟ್ಟಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿಯೇ ಬೆಂಗಳೂರಲ್ಲಿ 621 ಅಪಘಾತಗಳು ಸಂಭವಿಸಿ ಇದರಲ್ಲಿ 656 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ರಸ್ತೆ ಗುಂಡಿಯಿಂದಲೇ 10 ಮಂದಿ ಸಾವಿಗೀಡಾಗಿದ್ದಾರೆ.

ನಗರದ ನಾಲ್ಕು ವರ್ಷದ ಅಪಘಾತ ವಿವರ: 2019 ರಲ್ಲಿ 810 ರಸ್ತೆ ಅಪಘಾತ ಸಂಭವಿಸಿದ್ದು, 832 ಜನ ಮೃತಪಟ್ಟಿದ್ದಾರೆ. 2020 ರಲ್ಲಿ 632 ಅಪಘಾತದಲ್ಲಿ 657 ಮಂದಿ ಮೃತಪಟ್ಟಿದ್ದಾರೆ. 2021 ರಲ್ಲಿ 618 ಅಪಘಾತ ಸಂಭವಿಸಿದ್ದು, 651 ಮಂದಿ ಮೃತಪಟ್ಟಿದ್ದಾರೆ. ಇನ್ನು ಪ್ರಸಕ್ತ ಸಾಲಿನ 2022 ರಲ್ಲಿ ಈವರೆಗೆ 621 ರಸ್ತೆ ಅಪಘಾತಗಳು ಸಂಭವಿಸಿದ್ದು, 656 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಶೇ 17 ರಷ್ಟು ರಸ್ತೆ ಗುಂಡಿಯಿಂದ ಅಪಘಾತ ಸಂಭವಿಸಿದ್ದು. ವರ್ಷಕ್ಕೆ ಸರಾಸರಿ 30 ಜನ ರಸ್ತೆ ಗುಂಡಿಗೆ ಬಲಿಯಾಗುತ್ತಿದ್ದಾರೆ.

ಪರಿಹಾರಕ್ಕೆ ಅರ್ಜಿ ಸಲ್ಲಿಸದ ಸಂತ್ರಸ್ತರು: ರಸ್ತೆ ಗುಂಡಿ ಕಾರಣದಿಂದಾಗಿ ಸಂಭವಿಸುವ ಅಪಘಾತದಲ್ಲಿ ಬಲಿಯಾದರೆ ಮೃತ ಕುಟುಂಬಕ್ಕೆ 3 ಲಕ್ಷ ರೂ, ಗಂಭೀರ ಗಾಯಗೊಂಡರೆ 15 ಸಾವಿರ ಮತ್ತು ಮೂರು ದಿನಕ್ಕಿಂತ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ 10 ಸಾವಿರ ರೂ. ಮತ್ತು ಸಣ್ಣ ಗಾಯಗಳಾದರೆ 5 ಸಾವಿರ ರೂ. ಪರಿಹಾರವಾಗಿ ನೀಡುವುದಾಗಿ ಪಾಲಿಕೆ ತಿಳಿಸಿದೆ. ಆದರೆ ಇದೂವರೆಗೂ ಬಿಬಿಎಂಪಿ ರಸ್ತೆ ಗುಂಡಿಯಿಂದ ಮೃತಪಟ್ಟವರಿಗೆ ಪರಿಹಾರ ನೀಡಿಲ್ಲ. ರಸ್ತೆ ಗುಂಡಿಗೆ ಬಲಿಯಾದವರ ಕುಟುಂಬಸ್ಥರು ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಅರ್ಜಿ ಸಲ್ಲಿಸೋದು ಹೇಗೆ: ಅಪಘಾತ ನಡೆದ 30 ದಿನದಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಅರ್ಜಿದಾರ ನೀಡಿದ ದಾಖಲೆಗಳು ಸರಿಯಾಗಿದ್ದರೆ, ಪಾಲಿಕೆ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಅಪಘಾತಕ್ಕೆ ಪಾಲಿಕೆ ಅಸಮರ್ಪಕ ನಿರ್ವಹಣೆ ಕಾರಣ ಎಂಬುದು ದೃಢಪಟ್ಟರೆ ಪಾಲಿಕೆಯಿಂದ ಪರಿಹಾರ ವಿತರಿಸಲಾಗುತ್ತದೆ.

2022ರಲ್ಲಿ ನಡೆದ ರಸ್ತೆಗುಂಡಿ ಬಲಿ:

ಜನವರಿ 30-2022

ಬ್ಯಾಡರಹಳ್ಳಿ ಮುಖ್ಯ ರಸ್ತೆಯಲ್ಲಿದ್ದ ಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ಶಿಕ್ಷಕಿ ಶರ್ಮಿಳಾ ಮೃತಪಟ್ಟಿದ್ದರು.

ಮಾರ್ಚ್ 12-2022

ಎಂ.ಎಸ್. ಪಾಳ್ಯದ ಮುನೇಶ್ವರ ಲೇಔಟ್‌ನಲ್ಲಿ ರಸ್ತೆ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತ. ಜಲಮಂಡಳಿ ಅಗೆದಿದ್ದ ರಸ್ತೆಗುಂಡಿಗೆ ಬಿದ್ದಿದ್ದ ಅಶ್ವಿನ್‌(27) ಗಾಯಗೊಂಡು ನಂತರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಆಗಸ್ಟ್ 11-2022

ಕೆ.ಆರ್‌ ಪುರದಲ್ಲಿ ತಂದೆ ಸಂತೋಷ್‌ ಅವರ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಬಾಲಕ ಜೀವನ್‌ (10) ರಸ್ತೆ ಗುಂಡಿಯಿಂದ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತ ಬಾಲಕನ ತಂದೆ ಸಂತೋಷ್‌ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ ಆಗಿದ್ದು, ಈ ಹಿಂದೆ ಕೆ. ಆರ್‌ ಪುರ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು.

ಅಕ್ಟೋಬರ್ 17-2022

ಸುಜಾತ ಚಿತ್ರಮಂದಿರದ ಬಳಿ ಹೋಗುತ್ತಿದ್ದಾಗ ರಸ್ತೆಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ದ್ವಿಚಕ್ರ ವಾಹನ ಸವಾರರಿಬ್ಬರು ಬಿದ್ದಿದ್ದು, ಹಿಂಬದಿ ಕುಳಿತಿದ್ದ ಮಹಿಳೆ ಉಮಾದೇವಿ (42) ಮೇಲೆ ಕೆಎಸ್ಆರ್​ಟಿಸಿ ಬಸ್ ಹರಿದಿದ್ದರಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಓದಿ:ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ: ಸ್ಥಳದಲ್ಲಿ ಮಲಗಿ ಆಪ್​ ಕಾರ್ಯಕರ್ತರ ಪ್ರತಿಭಟನೆ

ABOUT THE AUTHOR

...view details