ಬೆಂಗಳೂರು:ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಯಾದ ಬಳಿಕ ಆತನಿಗೆ ಪಾಸ್‌ಪೋರ್ಟ್ ಮರಳಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಬೆಂಗಳೂರಿನ ಫ್ರಾನ್ಸಿಸ್ ಝೇವಿಯರ್ ಕ್ರಾಸ್ಟೋ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.
ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಖುಲಾಸೆಯಾದರೆ, ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಧಿಯ ಮುಗಿಯುವವರೆಗೆ ಕಾಯದೆ, ಅದೇ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ಪಾಸ್‌ಪೋರ್ಟ್ ತಮ್ಮ ಬಳಿಯೇ ಇಟ್ಟುಕೊಳ್ಳಬಾರದು ಎಂದು ನ್ಯಾಯಪೀಠ ಆದೇಶಿಸಿದೆ.
ಅರ್ಜಿದಾರ ಫ್ರಾನ್ಸಿಸ್ ಝೇವಿಯರ್‌ಗೆ ಪಾಸ್‌ಪೋರ್ಟ್ ಮರಳಿಸುವಂತೆ ಸಂಬಂಧಿಸಿದ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಆರೋಪಿ ಖುಲಾಸೆಯಾಗಿದ್ದಾನೆ. ಆದರೆ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂಬ ಕಾರಣಕ್ಕೆ ವಶಪಡಿಸಿಕೊಂಡಿದ್ದ ಪಾಸ್ಪೋರ್ಟ್ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವಂತಿಲ್ಲ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ:2015ರಲ್ಲಿ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮುಂಬೈ ಮೂಲದ ಫ್ರಾನ್ಸಿಸ್ ಝೇವಿಯರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆರೋಪಿಯಾಗಿದ್ದ ಆತನ ಪಾಸ್‌ಪೋರ್ಟ್ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯವು ವಶಕ್ಕೆ ಪಡೆದಿತ್ತು. ಬಳಿಕ 2023ರ ಏಪ್ರಿಲ್ 12ರಂದು ಪ್ರಕರಣದಲ್ಲಿ ಆರೋಪಿಯನ್ನು ನಿರಪರಾಧಿ ಎಂದು ಘೋಷಿಸಿ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಆದರೆ, ಖುಲಾಸೆ ನಂತರ ಸಿಆರ್‌ಪಿಸಿ ಸೆಕ್ಷನ್ 452ರ ಪ್ರಕಾರ (ವಶಪಡಿಸಿಕೊಂಡು ವಸ್ತುಗಳನ್ನು ಮರಳಿಸುವುದು) ಪಾಸ್‌ಪೋರ್ಟ್ ಮರಳಿಸಲು ನಿರಾಕರಿಸಿತ್ತು. ಪ್ರಕರಣ ಕುರಿತ ಮೇಲ್ಮನವಿ ಅವಧಿ ಮುಗಿಯುವವರೆಗೆ ಪಾಸ್‌ಪೋರ್ಟ್ ಮರಳಿಸುವುದಿಲ್ಲ ಎಂದು ವಿಚಾರಣಾ ನ್ಯಾಯಾಲಯ ಹೇಳಿತ್ತು. ಈ ಆದೇಶ ಪ್ರಶ್ನಿಸಿದ್ದ ಫ್ರಾನ್ಸಿಸ್ ಹೈಕೋರ್ಟ್ ಮೊರೆ ಹೋಗಿದ್ದರು.