ಬೆಂಗಳೂರು: ಪಶುಸಂಗೋಪನೆ ಇಲಾಖೆ ರೈತರ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೃಷಿಯ ಜೊತೆಗೆ ಪಶುಪಾಲನೆಯಲ್ಲಿ ತೊಡಗಿದವರು ಜಾನುವಾರು ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪಶುಸಂಗೋಪನೆ ಇಲಾಖೆಯ 15 ಸುಸಜ್ಜಿತ ಪಶು ಶಸ್ತ್ರಚಿಕಿತ್ಸಾ ವಾಹನ 'ಪಶು ಸಂಜೀವಿನಿ'ಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಸಿಎಂ, ಪಶು ಸಂಜೀವಿನಿ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೈತರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್, ಈ ಸುಸಜ್ಜಿತವಾದ ಪಶು ಶಸ್ತ್ರಚಿಕಿತ್ಸಾ ವಾಹನ ರೈತರ ಮನೆಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲಿದೆ. ಸದ್ಯ 15 ಜಿಲ್ಲೆಗಳಿಗೆ ಪಶು ಸಂಜೀವಿನಿ ನೀಡಲಾಗುತ್ತಿದ್ದು, ಮುಂದಿನ ದಿನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಈ ಸೇವೆ ವಿಸ್ತರಿಸಲಾಗುವುದು ಎಂದರು.
ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ಸೇವೆ ಜಾರಿಗೆ ತರಲಾಗುತ್ತಿದ್ದು, ಜಾನುವಾರಗಳ ಆರೋಗ್ಯ ರಕ್ಷಣೆಗೆ ಸರ್ಕಾರ ಸಜ್ಜಾಗಿದೆ. ರೈತರ ಕರೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಲಿದೆ. ಈ ಸೇವೆಗಳನ್ನು ಇಲಾಖೆಯ ಹೆಲ್ಪ್‌ಲೈನ್ ಸೇವೆಗಳಿಗೆ ಲಿಂಕ್ ಮಾಡಿ 24 x 7 ಜಾನುವಾರುಗಳ ರಕ್ಷಣೆ ಮಾಡುವ ಉದ್ದೇಶವಿದೆ ಎಂದರು.
ಯೋಜನೆಯ ಸಮಗ್ರ ವಿವರ
ಅನುದಾನ:
2019-20ನೇ ಸಾಲಿನ ಬಜೆಟ್ ಘೋಷಣೆಯ ರೂ 2.00 ಕೋಟಿ ಅನುದಾನ ಮತ್ತು ಇಲಾಖೆಯ ಇತರ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಪಶು ಚಿಕಿತ್ಸಾ ವಾಹನದ ( ಆ್ಯಂಬುಲೆನ್ಸ್) ವಿಶೇಷತೆಗಳು:
- ಸುಸಜ್ಜಿತ ಆ್ಯಂಬುಲೆನ್ಸ್ ವಾಹನದಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಾದ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಕೆ.
- 250 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್.
- 200 ಕೆ.ಜಿ. ತೂಕ ಸಾಮರ್ಥ್ಯದ ಶಸ್ತ್ರಚಿಕಿತ್ಸಾ ಟೇಬಲ್, ಎ.ಸಿ ವ್ಯವಸ್ಥೆ, ಪಶುವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ.
- ವಾಶ್ ಬೇಸಿನ್, 100 ವ್ಯಾಟ್ ಎಲ್ಇಡಿ ಲೈಟ್, ಆಮ್ಲಜನಕ ಸಪೋರ್ಟ್ ಸಿಸ್ಟಮ್, ಆಕಸ್ಮಿಕ ಬೆಂಕಿ ಅನಾಹುತ ನಿವಾರಣೆ ವ್ಯವಸ್ಥೆ (fire extinguisher) ಇದೆ.
- ಶಸ್ತ್ರಚಿಕಿತ್ಸಾ ಉಪಕರಣಗಳ ಕಿಟ್ (surgical kit), ಮರಣೋತ್ತರ ಪರೀಕ್ಷೆ ಉಪಕರಣಗಳ ಕಿಟ್ (PM kit), ಪ್ರಸೂತಿ ಕಿಟ್ (dystocia kit) ಮತ್ತು ಇತರ ಉಪಕರಣಗಳನ್ನು ಇಡಲು ಕಪಾಟುಗಳ ವ್ಯವಸ್ಥೆ ಇದೆ. ಪಶು ಸಂಜೀವಿನಿ ವಾಹನ ಲೋಕಾರ್ಪಣೆ