ಬೆಂಗಳೂರು:ಮುಂದೆ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಹೊಂದಾಣಿಕೆ ಬೇಡ ಎಂಬ ಅಭಿಪ್ರಾಯವನ್ನು ಪಕ್ಷದ ಮುಖಂಡರು ವ್ಯಕ್ತಪಡಿಸಿದ್ದಾರೆಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಸಭೆ ಬಳಿಕ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆ ಮಾಡಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರಲ್ಲಿ ಹೊಂದಾಣಿಕೆಯಾಗದ ಹಿನ್ನೆಲೆ ಪ್ರತ್ಯೇಕವಾಗಿ ಚುನಾವಣೆ ಎದುರಿಸುವ ಅಭಿಪ್ರಾಯವನ್ನು ನಾಯಕರು ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿರುವ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ನ ತೀರ್ಪು ನೋಡಿಕೊಂಡು ಮುಂದಿನ ಹೆಜ್ಜೆ ತೆಗೆದುಕೊಳ್ತೇವೆ. ನಮ್ಮ ಮುಖಂಡರು ಈ ಬಗ್ಗೆ ನಿಮ್ಮ ತೀರ್ಮಾನವೇ ಅಂತಿಮ ಎಂದಿದ್ದಾರೆ. ಚುನಾವಣೆ ಮೂರು ತಿಂಗಳಿಗೆ ಬರುವುದೋ, ಆರು ತಿಂಗಳಿಗೆ ಬರುವುದೋ ಗೊತ್ತಿಲ್ಲ. ಆದರೆ ನಾವು ಮಾತ್ರ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯ ಪ್ರವಾಸ ಮಾಡಲು ಎಲ್ಲಾ ನಾಯಕರಿಗೆ ಸೂಚನೆ ಕೊಟ್ಟಿದ್ದೇನೆ. ಜೊತೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹದಿನಾಲ್ಕು ತಿಂಗಳ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸಲು ಸೂಚಿಸಿದ್ದೇನೆ ಎಂದರು.
ಬೆಂಗಳೂರಿನಲ್ಲಿ ಆಗಸ್ಟ್ 7ರಂದು ಜೆಡಿಎಸ್ ಸಮಾವೇಶ ನಡೆಸುತ್ತೇವೆ. ಅಲ್ಲಿ ನೂತನ ಜಿಲ್ಲಾ ಅಧ್ಯಕ್ಷರನ್ನ ನೇಮಕ ಮಾಡುತ್ತೇವೆ. ನಿಷ್ಕ್ರಿಯಗೊಂಡಿರುವ ಇತರ ಘಟಕಗಳನ್ನೂ ಪುನಶ್ಚೇತನ ಮಾಡುತ್ತೇವೆ. ಹಾಗೆಯೇ ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಜೆಡಿಎಸ್ ಸಕ್ರಿಯಗೊಳ್ಳಲಿದೆ. ಪಕ್ಷ ಬಿಟ್ಟು ಹೊರ ಹೋಗಿರುವ ಮೂವರು ಅನರ್ಹ ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದೇವೆ ಎಂದರು.
ಇನ್ನು, ಇದೇ ಸಂದರ್ಭದಲ್ಲಿ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಿಂದೆ ಅವರು ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಪಕ್ಷಾತೀತವಾಗಿ ಅವರು ಕೆಲಸ ಮಾಡುತ್ತಾರೆ ಎಂಬ ಭರವಸೆ ಇದೆ. ಮತ್ತೊಮ್ಮೆ ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.