ಬೆಂಗಳೂರು: ತಮ್ಮ ಖಾತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸ್ವಪಕ್ಷೀಯ ಸಚಿವರು, ಶಾಸಕರು ತಿರುಗಿಬಿದ್ದಿದ್ದಾರೆ.
ನಾವು ಮಂತ್ರಿಗಳಾಗಲು ಬಿ.ಎಸ್.ಯಡಿಯೂರಪ್ಪ ಕಾರಣ ಎಂಬುದರಿಂದ ಹಿಡಿದು, ತಮಗಿರುವ ಅಧಿಕಾರವನ್ನು ಬಳಸಿ ಯಾರ ಖಾತೆಗಾದರೂ ಅವರು ಕೈ ಹಾಕಬಹುದು ಎಂಬಲ್ಲಿಯ ತನಕ ಇವರು ಮಾತನಾಡಿದ್ದಾರೆ. ಆ ಮೂಲಕ ಈಶ್ವರಪ್ಪ ಅವರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಬೇಕಿದೆ. ಇದಾಗದಿದ್ದರೆ ಯಡಿಯೂರಪ್ಪ ಅವರ ಆಕ್ರೋಶದಿಂದ ಬಚಾವಾಗಲು ವರಿಷ್ಠರ ನೆರವು ಬಯಸಬೇಕಿದೆ.
ಈ ಹಿಂದೆ ಈಶ್ವರಪ್ಪ ಅವರ ಜತೆ ಜತೆಗೇ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದ ಹಾಲಿ ಕಂದಾಯ ಸಚಿವ ಆರ್.ಅಶೋಕ್, ನಾವು ಮಂತ್ರಿಗಳಾಗಿರುವುದು ಯಡಿಯೂರಪ್ಪ ಅವರ ವಿವೇಚನಾ ಅಧಿಕಾರದಿಂದ ಎಂದು ಈಶ್ವರಪ್ಪ ಅವರನ್ನು ಚುಚ್ಚಿದ್ದಾರೆ. ಯಡಿಯೂರಪ್ಪ ಅವರು ಬಯಸಿದ್ದರಿಂದ ನಾವು ಅವರ ಸಂಪುಟದಲ್ಲಿದ್ದೇವೆ. ಹೀಗಾಗಿ ಈಶ್ವರಪ್ಪ ಅವರು ತಮ್ಮ ಭಾವನೆಯನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕಿತ್ತು ಎಂದಿದ್ದಾರೆ.
ಇದೇ ರೀತಿ ಸಚಿವ ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಪರಣ್ಣ ಮುನುವಳ್ಳಿ, ಎ.ಎಸ್. ಪಾಟೀಲ್ ನಡಹಳ್ಳಿ, ಮತ್ತಿತರರು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದು, ಆ ಮೂಲಕ ಈಶ್ವರಪ್ಪ ಪ್ರಕರಣ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ.