ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಬಿಜೆಪಿ ವರಿಷ್ಠ ಮಂಡಳಿಯಾಗಿರುವ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಸಮಿತಿ ಕಳುಹಿಸಿರುವ ಆಕಾಂಕ್ಷಿಗಳ ಪಟ್ಟಿಯನ್ನು 15 ಜನ ಸದಸ್ಯರುಳ್ಳ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಪರಾಮರ್ಶೆ ನಡೆಸಿದ್ದು, ಪಕ್ಷದ ವರಿಷ್ಠ ಮಂಡಳಿಯಾಗಿರುವ ಸಂಸದೀಯ ಮಂಡಳಿಗೆ ಕಳುಹಿಸಿಕೊಟ್ಟಿದೆ. ಇಂದು ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ, ಸರ್ಬಾನಂದ್ ಸೋನವಾಲ, ಕೆ.ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ ಪುರ, ಸುಧಾ ಯಾದವ್, ಸತ್ಯನಾರಾಯಣ ಜಟಿಯಾ ಹಾಗು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾಗಿಯಾಗಿದ್ದಾರೆ.
ಸಮೀಕ್ಷಾ ವರದಿಗೆ ಪೂರಕವಾಗಿ ಪಟ್ಟಿ ಬಿಡುಗಡೆ: ರಾಜ್ಯ ಸಮಿತಿ ಶಿಫಾರಸು ಮಾಡಿರುವ ಪಟ್ಟಿ ಹಾಗೂ ಅದಕ್ಕೆ ಕೇಂದ್ರ ಚುನಾವಣಾ ಸಮಿತಿ ನೀಡಿರುವ ಮರುಪರಿಶೀಲನಾ ಅಭಿಪ್ರಾಯವನ್ನು ಒಳಗೊಂಡಂತೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತು ಮಹತ್ವದ ಸಭೆ ನಡೆಯುತ್ತಿದೆ. ಎರಡೂ ಸಮಿತಿಗಳಲ್ಲಿ ರಾಜ್ಯದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಇದ್ದು, ಯಡಿಯೂರಪ್ಪ ಬೆಂಬಲಿಗರಿಗೆ ಟಿಕೆಟ್ ಮಿಸ್ ಆಗುವುದಿಲ್ಲ ಎನ್ನುವ ನಿರೀಕ್ಷೆ ಮೂಡಿಸಿದೆ. ಆದರೆ ಟಿಕೆಟ್ ಆಯ್ಕೆಗೆ ಹೈಕಮಾಂಡ್ ತನ್ನದೇ ಆದ ಮಾನದಂಡವನ್ನು ಅನುಸರಿಸುತ್ತಿದ್ದು, ಗೆಲ್ಲುವ ಸಾಮರ್ಥ್ಯಕ್ಕೆ ತನ್ನದೇ ಆದ ಸಮೀಕ್ಷಾ ವರದಿಯನ್ನು ಪೂರಕವಾಗಿರಿಸಿಕೊಂಡು ಚರ್ಚಿಸಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದೆ. ಹಾಗಾಗಿ ಇಲ್ಲಿ ಯಾರ ಬೆಂಬಲಿಗರು ಎನ್ನುವುದಕ್ಕಿಂತ ಹೈಕಮಾಂಡ್ ತನ್ನದೇ ಆದ ರೀತಿಯಲ್ಲಿ ಪಟ್ಟಿ ಅಂತಿಮಗೊಳಿಸಲಿದೆ ಎಂಬುದು ತಿಳಿದುಬಂದಿದೆ.