ಕರ್ನಾಟಕ

karnataka

ETV Bharat / state

ನೂತನ ಸಂಸತ್ ಭವನ ಉದ್ಘಾಟನೆ, ರಾಷ್ಟ್ರಪತಿ ಆಹ್ವಾನಿಸದ ಓಂ ಬಿರ್ಲಾ ಕ್ಷಮೆ ಯಾಚಿಸಬೇಕು: ಉಗ್ರಪ್ಪ ಒತ್ತಾಯ - ಪ್ರಧಾನಿಗೆ ಮಾತ್ರ ಆಹ್ವಾನ

ನವದೆಹಲಿಯಲ್ಲಿ ನೂತನ ಸಂಸತ್ ಭವನವನ್ನು 2023 ಮೇ 28ರಂದು ಸ್ಪೀಕರ್ ಓಂ ಬಿರ್ಲಾ ಉದ್ಘಾಟನೆ ಮಾಡುತ್ತಿದ್ದು, ಪ್ರಧಾನಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆದರೆ ಈಗಲೂ ರಾಷ್ಟ್ರಪತಿಗಳಿಗೆ ಆಹ್ವಾನ ನೀಡದೆ ಅಪಮಾನ ಮಾಡಿದ್ದಾರೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆರೋಪಿಸಿದ್ದಾರೆ.

Former MP VS Ugrappa spoke at the press conference.
ಮಾಜಿ ಸಂಸದ ವಿ ಎಸ್ ಉಗ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By

Published : May 24, 2023, 5:46 PM IST

ಬೆಂಗಳೂರು:ನೂತನ ಸಂಸತ್ ಭವನ ಉದ್ಘಾಟನೆ ಸಮಾರಂಭಕ್ಕೆ ರಾಷ್ಟ್ರಪತಿಯನ್ನು ಆಹ್ವಾನಿಸಿಲ್ಲ. ಹಾಗಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಒತ್ತಾಯಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 97 ವರ್ಷಗಳ ಹಿಂದೆ ಹಾಲಿ ಸಂಸತ್ ಭವನವನ್ನು 83 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿತ್ತು. ಜ.18, 1927 ರಂದು ಆಗಿನ ವೈಸ್ ರಾಯ್ ಲಾರ್ಡ್ ಇರ್ವಿನ್ ಉದ್ಘಾಟನೆ ಮಾಡಿದ್ದರು. ಆಗ ಸಂಸತ್ತಿನಲ್ಲಿ ಉಭಯ ಸದನಗಳಲ್ಲಿ 790 ಆಸನಗಳ ಸಾಮರ್ಥ್ಯವಿತ್ತು. ಇದನ್ನು ವಿನ್ಯಾಸ ಮಾಡಿದ್ದು ಸರ್ ಎಡ್ವಿನ್ ಲುಟಿನ್ಸ್ ಹಾಗೂ ಸರ್ ಅರ್ಬರಕರ್ ಎಂಬುವವರು. ಇಂದು ಬದಲಾದ ಸನ್ನಿವೇಶದಲ್ಲಿ ಸಂಸತ್ ಸದಸ್ಯರಿಗೆ ಸ್ಥಳದ ಕೊರತೆ ಇದೆ ಎಂದು ನೂತನ ಸಂಸತ್ ಭವನ ನಿರ್ಮಾಣಕ್ಕೆ ಡಿ.10, 2020ರಲ್ಲಿ ಶಂಕುಸ್ಥಾಪನೆ ಮಾಡಿ ನೂತನ ಭವನ ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ವಿವರಿಸಿದ್ದರು.

ಆಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಯಾವುದೇ ಆಹ್ವಾನ ಇರಲಿಲ್ಲ. ಈ ಭವನಕ್ಕೆ 862 ಕೋಟಿ ರೂಪಾಯಿ ವೆಚ್ಚವಾಗಿದೆ. ಅದರ ವಿನ್ಯಾಸಕರು ಬಿಮಲ್ ಪಟೇಲ್ ಆಗಿದ್ದಾರೆ. ಇದರಲ್ಲಿ 1272 ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಲೋಕಸಭೆಗೆ 888 ಹಾಗೂ ರಾಜ್ಯಸಭೆಗೆ 384 ಆಸನಗಳನ್ನು ನೀಡಲಾಗಿದೆ. ಇದರ ಉದ್ಘಾಟನೆ ಮೇ 28, 2023ಕ್ಕೆ ಮಾಡಲು ಮುಂದಾಗಿದ್ದಾರೆ. ಇದನ್ನು ಸ್ಪೀಕರ್ ಓಂ ಬಿರ್ಲಾ ಅವರು ಉದ್ಘಾಟನೆ ಮಾಡುತ್ತಿದ್ದು, ಕೇವಲ ಪ್ರಧಾನಿಗಳಿಗೆ ಆಹ್ವಾನ ನೀಡಲಾಗಿದೆ. ಈಗಲೂ ರಾಷ್ಟ್ರಪತಿಗಳಿಗೆ ಆಹ್ವಾನ ನೀಡಿಲ್ಲ ಎಂದು ಉಗ್ರಪ್ಪ ಬೇಸರ ವ್ಯಕ್ತಪಡಿಸಿದರು.

ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಈಗಿನ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಸಂಸತ್ ಎಂದರೆ ಅದರಲ್ಲಿ ರಾಷ್ಟ್ರಪತಿಗಳು ಒಂದು ಭಾಗವಾಗಿರುತ್ತಾರೆ ಎಂದು ಸಂವಿಧಾನ ಹೇಳುತ್ತದೆ. ರಾಷ್ಟ್ರಪತಿ ಹೊರತಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲು ಸಾಧ್ಯವಿಲ್ಲ.

ಆದರೆ ದುರಾದೃಷ್ಟವಶಾತ್, ಕೇಂದ್ರ ಸರ್ಕಾರ ಆರ್ ಎಸ್ಎಸ್ ಮಾರ್ಗದರ್ಶನದಲ್ಲಿ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯದಿಂದ ಬಂದಿರುವ ರಾಷ್ಟ್ರಪತಿಗಳನ್ನು ಸಂಸತ್ ಭವನದ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೇ ಅಪಮಾನ ಮಾಡುತ್ತಿದೆ. ಇದು ಸಂವಿಧಾನಕ್ಕೆ ಮಾಡುವ ಅಪಚಾರ. ರಾಷ್ಟ್ರಪತಿ ಹುದ್ದೆಗೆ ಅಪಮಾನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಧಾನಮಂತ್ರಿಗಳು ಅಪಚಾರ ಎಸಗಿದ್ದಾರೆ ಎಂದು ಮಾಜಿ ಸಂಸದರು ದೂರಿದರು.

ಸಂವಿಧಾನಿಕ ಸಂಸ್ಥೆಗಳನ್ನು ಗೌರವಿಸುವುದು ಪ್ರತಿ ಪ್ರಜೆಯ ಕರ್ತವ್ಯ. ಅದು ಪ್ರಧಾನಿಗಳಾಗಿರಲಿ ಅಥವಾ ಜನಸಾಮಾನ್ಯನಾಗಲಿ. ಹೀಗಾಗಿ ರಾಷ್ಟ್ರಪತಿಗಳನ್ನು ಕೇವಲ ಹೆಸರಿಗೆ ಮಾತ್ರ ಇಟ್ಟುಕೊಳ್ಳುವುದಲ್ಲ. ಅವರಿಗಿರುವ ಅಧಿಕಾರವನ್ನು ನೀಡಿ, ಸಂಸತ್ ಭವನ ಉದ್ಘಾಟನೆಗೆ ಆಹ್ವಾನ ನೀಡಬೇಕು. ರಾಷ್ಟ್ರಪತಿಗಳಿಗೆ ಆಹ್ವಾನ ನೀಡದಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಅಪಚಾರ ಎಸಗಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ :ಯು ಟಿ ಖಾದರ್ ಅವರ ಮುಂದಾಳತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ABOUT THE AUTHOR

...view details