ಬೆಂಗಳೂರು: ಪರೇಶ್ ಮೆಸ್ತಾ ಸಾವು ಪ್ರಕರಣದ ಮರು ತನಿಖೆ ನಡೆಸುವಂತೆ ಪರೇಶ್ ಮೆಸ್ತಾ ಅವರ ತಂದೆ ಕಮಲಾಕರ್ ಮೆಸ್ತಾ ಇಂದು ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ನನ್ನ ಮಗ ಪರೇಶ್ ಮೆಸ್ತಾನ ಸಾವು ಅಸಹಜವಾಗಿದ್ದು, ಸಿಬಿಐಗೆ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂಬ ಕಾರಣಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ. ಇದರಿಂದ ನನಗೆ ನ್ಯಾಯ ವಂಚನೆ ಆಗಿದೆ. ಪರೇಶ್ ಮೆಸ್ತಾನ ಪ್ರಕರಣವನ್ನು ಸಿಬಿಐಗೆ ನೀಡುವಾಗ 4 ತಿಂಗಳ ಅವಧಿ ಮೀರಿದ್ದು, ಬಹುತೇಕ ಸಾಕ್ಷ್ಯಾಧಾರಗಳನ್ನು ನಾಶ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಆಳವಾದ ತನಿಖೆ ಮಾಡಬೇಕಾದ ಅವಶ್ಯಕತೆ ಇದ್ದು ಪುನರ್ ಸಿಬಿಐ ತನಿಖೆಗೆ ಆದೇಶ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಕಮಾಲಕರ್ ಮೆಸ್ತಾ ಅವರ ಮನವಿ ಆಲಿಸಿದ ಸಿಎಂ, ತಂದೆಯಾಗಿ ನಿಮ್ಮ ಕಷ್ಟವನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತದೆ. ಮನವಿ ಪರಿಶೀಲಿಸಿ, ಪುನರ್ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.