ಬೆಂಗಳೂರು : ಪರೇಶ್ ಮೇಸ್ತ ಸಾವು ಕೊಲೆಯಲ್ಲ ಎಂದು ಸಿಬಿಐ ತನಿಖಾ ವರದಿ ಸಲ್ಲಿಕೆ ಮಾಡಿದ ಪ್ರಕರಣ ಸಂಬಂಧ ಬಿಜೆಪಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯಗಳನ್ನು ನಾಶ ಮಾಡಿದೆ. ಹಾಗಾಗಿ ಸಿದ್ದರಾಮಯ್ಯ ಅವರೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರೇಶ್ ಮೇಸ್ತಾ ಸಾವು ಕೊಲೆಯೇ ಇದರಲ್ಲಿ ಎರಡು ಮಾತಿಲ್ಲ. ಇದನ್ನು ಅವರ ತಂದೆಯೇ ಹೇಳಿದ್ದಾರೆ. ಇದಕ್ಕೆ ಪಿಎಫ್ಐ ಸಂಘಟನೆಯವರೇ ಕಾರಣ ಎಂದು ಹೇಳಿದ್ದಾರೆ. ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಕೋರ್ಟ್ ಗೆ ಕೊಟ್ಟಿದ್ದಾರೆ. ಆದರೆ, ಅದರ ಸಂಪೂರ್ಣ ವಿವರ ನಮಗೆ ಗೊತ್ತಿಲ್ಲ ಕೋರ್ಟ್ ನಿಂದ ಸಂಪೂರ್ಣ ತನಿಖಾ ವರದಿ ಬರಲಿ ಎಂದು ಹೇಳಿದರು.
ಸಿದ್ದರಾಮಯ್ಯ ಮೊದಲು ಕ್ಷಮೆ ಕೇಳಬೇಕು :ನಮ್ಮನ್ನು ಕ್ಷಮೆ ಕೇಳಿ ಎಂದು ಕೇಳುವ ಸಿದ್ದರಾಮಯ್ಯ ಮೊದಲು ರಾಜೀನಾಮೆ ಕೊಡಬೇಕು. ಈ ಕೊಲೆಯ ಸಾಕ್ಷ್ಯ ನಾಶ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. ಅದಕ್ಕಾಗಿ ಅವರು ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರ ಕೊಲೆ ಆಯಿತು. ಇದಕ್ಕೆ ಕಾಂಗ್ರೆಸ್ ಮಾಜಿ ಶಾಸಕ ವಿನಯ್ ಕುಲಕರ್ಣಿ ಕಾರಣ ಎಂಬುದು ಗೊತ್ತಿರಲಿಲ್ಲವೇ..? ರುದ್ರೇಶ್ ಹತ್ಯೆಯಾಯಿತು. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ಕಾರಣ. ಪಿಎಫ್ಐ ಸಂಘಟನೆ ಮೇಲಿನ ಕೇಸ್ ವಾಪಸ್ ಪಡೆದಿದ್ದಾರೆ. ಈ ವಿಷಯವನ್ನು ಮುಂದೆ ರಾಜ್ಯದ ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಸಿಬಿಐ ವರದಿ ಒಪ್ಪಲ್ಲ:ಡಿಕೆ ರವಿ ಆತ್ಮಹತ್ಯೆ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್, ಇವರು ಈ ಎಲ್ಲ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಕೆ ಜೆ ಜಾರ್ಜ್ ಕಾರಣ. ನಾವು ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಪರೇಶ್ ಮೇಸ್ತಾ ಪ್ರಕರಣದ ಕುರಿತು ಸಿಬಿಐ ವರದಿಯನ್ನು ನಾವು ಒಪ್ಪೋದಿಲ್ಲ. ಭಂಡ ಧೈರ್ಯದಿಂದ ಪಿಎಫ್ಐ ಗೆ ಸಪೋರ್ಟ್ ಮಾಡಿದ್ದರಿಂದ ಸಿದ್ದರಾಮಯ್ಯನ ಸರ್ಕಾರದಿಂದಲೇ ಈ ಕೊಲೆ ಆಗಿದೆ ಎಂದು ಹೇಳಿದರು.