ಬೆಂಗಳೂರು: ದಂಪತಿಯ ನಡುವಿನ ಮಕ್ಕಳ ಸುಪರ್ದಿಗೆ ವಹಿಸುವ ಪ್ರಕರಣಗಳಲ್ಲಿ ಸೋಲುವ ಪೋಷಕರಿಗೆ ಮಗುವಿನ ಭೇಟಿಗೆ ಸಾಕಷ್ಟು ಅವಕಾಶವನ್ನಾದರೂ ಕಲ್ಪಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತನ್ನ ಅಪ್ತಾಪ್ತ ಮಗನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅಪ್ತಾಪ್ತ ಮಗುವಿನ ಭೇಟಿ ಹಕ್ಕು, ಕಸ್ಟಡಿ ಮತ್ತು ಪೋಷಕತ್ವಕ್ಕೆ ಸಂಬಂಧಿಸಿದಂತೆ ಪತಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಪಾಲನೆ ಮಾಡಬೇಕು ಎಂದು ನ್ಯಾಯಾಲಯ ಪತ್ನಿಗೆ ನಿರ್ದೇಶನ ನೀಡಿದೆ. ಮಕ್ಕಳ ಕಸ್ಟಡಿ ಪ್ರಕರಣಗಳಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ಹೈಕೋರ್ಟ್, ಯಶಿತಾ ಸಾಹು ವರ್ಸಸ್ ಸ್ಟೇಟ್ ಆಫ್ ರಾಜಸ್ಥಾನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದ್ದು, ಪ್ರಕರಣ ಸಂಬಂಧ ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದಂತೆ ಪತ್ನಿ, ಬೇಸಿಗೆ ರಜೆಯಲ್ಲಿ ಮಗುವನ್ನು ತಂದೆಯ ವಶಕ್ಕೆ ಒಪ್ಪಿಸಬೇಕು ಎಂದು ಆದೇಶಿಸಿದೆ.
ಮಗುವಿನ ಪೋಷಕತ್ವಕ್ಕೂ ಮಗುವಿನ ಕಸ್ಟಡಿಗೂ ವ್ಯತ್ಯಾಸವಿದೆ. ಮಕ್ಕಳ ಕಸ್ಟಡಿ ಪ್ರಕರಣಗಳಲ್ಲಿ ಸೋಲುವ ಪೋಷಕರಿಗೆ ಸಾಕಷ್ಟು ಭೇಟಿಯ ಹಕ್ಕು ನೀಡಬೇಕಾಗುತ್ತದೆ. ಆ ಮೂಲಕ ಮಗು ತಂದೆಯ ಜತೆ ಸಾಮಾಜಿಕ, ಭೌತಿಕ ಸಂಪರ್ಕ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ. ತಂದೆಯೂ ಸಹ ರಜೆ ಪಡೆದು ಪೂರ್ಣ ಸಮಯವನ್ನು ಮಗುವಿನ ಜತೆ ಕಾಲ ಕಳೆಯಬೇಕಾಗುತ್ತದೆ. ಆ ಅವಧಿಯಲ್ಲಿ ಮಗುವಿನ ಅಜ್ಜಿ ಜತೆಯಲ್ಲಿರಬಹುದು.